ಜೋಧ್ಪುರ (ರಾಜಸ್ಥಾನ): ಇಂದಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಫೋನ್ ಪ್ರತಿಯೊಬ್ಬ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಇದೇ ಮೊಬೈಲ್ ಫೋನ್ ಸದ್ಯ ಜೀವಕ್ಕೆ ಕಂಟಕವಾಗುತ್ತಿರುವ ಸರಣಿ ಘಟನೆಗಳು ಆತಂಕ ಮೂಡಿಸುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ, ರಾಜಸ್ಥಾನದಲ್ಲಿ ವ್ಯಾಪಾರಿಯೊಬ್ಬರ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್ ದಿಢೀರನೆ ಸ್ಫೋಟಗೊಂಡಿರುವ ಭೀಕರ ಘಟನೆ ಇತ್ತೀಚೆಗೆ ನಡೆದಿದೆ.
ಜೇಬಿನಿಂದ ಬಂದ ಹೊಗೆ, ಕ್ಷಣಾರ್ಧದಲ್ಲಿ ಸ್ಫೋಟ:
ರಾಜಸ್ಥಾನದ ಜೋಧ್ಪುರದ ಮಂಡೋರ್ ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರು ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಅವರ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್ನಿಂದ ದಿಢೀರನೆ ಹೊಗೆ ಬರಲು ಪ್ರಾರಂಭಿಸಿದೆ. ವ್ಯಾಪಾರಿ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಕ್ಷಣಾರ್ಧದಲ್ಲಿ ಫೋನ್ ಭೀಕರವಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕೊಠಡಿಯಾದ್ಯಂತ ದಟ್ಟವಾದ ಹೊಗೆ ಆವರಿಸಿಕೊಂಡಿದೆ.
ಮೊಬೈಲ್ ಸ್ಫೋಟದ ತೀವ್ರತೆಗೆ ವ್ಯಾಪಾರಿಯ ಕಾಲು ಹಾಗೂ ಜೇಬಿನ ಭಾಗ ತೀವ್ರವಾಗಿ ಸುಟ್ಟುಹೋಗಿದ್ದು, ಅವರು ನೋವಿನಿಂದ ಕಿರುಚಾಡಿದ್ದಾರೆ. ಕೂಡಲೇ ಎಚ್ಚೆತ್ತ ಸಹೋದ್ಯೋಗಿಗಳು ಹಾಗೂ ಸ್ಥಳೀಯರು ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ವ್ಯಾಪಾರಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಇಡೀ ಭೀಕರ ದೃಶ್ಯಗಳು ಮಾರುಕಟ್ಟೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರನ್ನು ಬೆಚ್ಚಿಬೀಳಿಸಿದೆ.
ದೇಶಾದ್ಯಂತ ತಾಪಮಾನ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಅತಿಯಾದ ಬಿಸಿಲಿಗೆ ಫೋನ್ ಕಾಯುವುದು ಅಥವಾ ಬ್ಯಾಟರಿಯಲ್ಲಿನ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಮೊಬೈಲ್ ಬಳಸುವಾಗ ಸಾರ್ವಜನಿಕರು ವಹಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು ಇಲ್ಲಿವೆ:
ಬಿಸಿಲಿನಿಂದ ದೂರವಿಡಿ: ಮೊಬೈಲ್ ಫೋನ್ ಅನ್ನು ನೇರ ಸೂರ್ಯನ ಬಿಸಿಲಿನಲ್ಲಿ ಅಥವಾ ಅತಿಯಾದ ಶಾಖವಿರುವ ಸ್ಥಳಗಳಲ್ಲಿ ಇಡಬೇಡಿ.
ಬ್ಯಾಟರಿ ಪರಿಶೀಲಿಸಿ: ಫೋನ್ನ ಬ್ಯಾಟರಿ ಸ್ವಲ್ಪ ಉಬ್ಬಿದಂತೆ ಕಂಡುಬಂದರೂ ನಿರ್ಲಕ್ಷಿಸದೆ ತಕ್ಷಣವೇ ಅಧಿಕೃತ ಸೇವಾ ಕೇಂದ್ರದಲ್ಲಿ ಬದಲಾಯಿಸಿ.
ಚಾರ್ಜಿಂಗ್ ವೇಳೆ ಬಳಕೆ ಬೇಡ: ಫೋನ್ ಚಾರ್ಜಿಂಗ್ಗೆ ಹಾಕಿರುವಾಗ ಯಾವುದೇ ಕಾರಣಕ್ಕೂ ಗೇಮ್ ಆಡುವುದು, ದೀರ್ಘವಾಗಿ ಮಾತನಾಡುವುದು ಮಾಡಬೇಡಿ.
ದಿಂಬಿನ ಅಡಿ ಇಡಬೇಡಿ: ರಾತ್ರಿ ಮಲಗುವಾಗ ಫೋನ್ ಅನ್ನು ದಿಂಬಿನ ಅಡಿಯಲ್ಲಿ ಅಥವಾ ಗಾಳಿ ಆಡದ ಮುಚ್ಚಿದ ಸ್ಥಳಗಳಲ್ಲಿ ಇಟ್ಟು ಮಲಗುವ ಅಭ್ಯಾಸವನ್ನು ಬಿಟ್ಟುಬಿಡಿ.