Skip to main content

Police Roundup

ಅಯೋಧ್ಯೆ ರಾಮ ಮಂದಿರ ದೇಣಿಗೆಯಲ್ಲಿ ಅಕ್ರಮ ಆರೋಪ; 200 ಕೆಜಿ ಬೆಳ್ಳಿ ಇಟ್ಟಿಗೆಗಳ ಲೆಕ್ಕ ಕೇಳಿದ ಸಿಂಧಿ ಸಮುದಾಯ!

Share News

ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಶ-ವಿದೇಶಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ಮೌಲ್ಯದ ದೇಣಿಗೆಗಳ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ವಿವಾದ ಭುಗಿಲೆದ್ದಿದೆ. ಮಂದಿರಕ್ಕೆ ಭಕ್ತಿಯಿಂದ ಸಮರ್ಪಿಸಲಾಗಿದ್ದ ಸುಮಾರು 200 ಕೆಜಿ ಬೆಳ್ಳಿ ಇಟ್ಟಿಗೆಗಳಿಗೆ ಯಾವುದೇ ಅಧಿಕೃತ ಲೆಕ್ಕಪತ್ರ ಇಲ್ಲ ಎಂದು ಖ್ಯಾತ ಉದ್ಯಮಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

 

​ಕ್ಯಾಸಲ್ಸ್ ಗ್ರೂಪ್ ಆಫ್ ಕಂಪನೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಾಜು ವಿ. ಮನ್ವಾನಿ ಅವರು ಈ ಕುರಿತು ಧ್ವನಿ ಎತ್ತಿದ್ದು, ಸಿಂಧಿ ಸಮುದಾಯದ ಪರವಾಗಿ ನೀಡಲಾಗಿದ್ದ ಕೋಟ್ಯಂತರ ರೂ. ಮೌಲ್ಯದ ಬೆಳ್ಳಿಯ ದುರುಪಯೋಗವಾಗಿರುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

 

​ಡಾ. ರಾಜು ವಿ. ಮನ್ವಾನಿ ಅವರ ಪ್ರಕಾರ, ಸಿಂಧಿ ಸಮುದಾಯದ ಪರವಾಗಿ ತಲಾ ಒಂದು ಕೆಜಿ ತೂಕದ 200 ಬೆಳ್ಳಿ ಇಟ್ಟಿಗೆಗಳನ್ನು 2021ರ ಜನವರಿ 26ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಖುದ್ದಾಗಿ ಹಸ್ತಾಂತರಿಸಲಾಗಿತ್ತು.

​ಆದರೆ, ದೇಣಿಗೆ ಸ್ವೀಕರಿಸುವ ಸಂದರ್ಭದಲ್ಲಿ ಟ್ರಸ್ಟ್‌ನಿಂದ ಯಾವುದೇ ರಸೀದಿಯನ್ನು ನೀಡಿರಲಿಲ್ಲ.

​”ಬೆಳ್ಳಿಯನ್ನು ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದನ್ನು ನಂತರ ನಿರ್ಧರಿಸಲಾಗುವುದು” ಎಂದು ಟ್ರಸ್ಟ್ ಅಧಿಕಾರಿಗಳು ದಾನಿಗಳಿಗೆ ಭರವಸೆ ನೀಡಿದ್ದರು.

 

ದೇಣಿಗೆ ನೀಡಿದ ಸಂದರ್ಭದಲ್ಲಿ ಈ 200 ಕೆಜಿ ಬೆಳ್ಳಿಯ ಮೌಲ್ಯ ಸುಮಾರು 1.5 ಕೋಟಿಯಿಂದ 2 ಕೋಟಿ ರೂ. ಇತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಗಣನೀಯವಾಗಿ ಏರಿಕೆಯಾಗಿದ್ದು, ಸುಮಾರು 6 ಕೋಟಿಯಿಂದ 7 ಕೋಟಿ ರೂ. ತಲುಪಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ರಾಮ ಮಂದಿರ ದೇಣಿಗೆ ನಿರ್ವಹಣೆಯ ಅಕ್ರಮಗಳ ವರದಿಗಳು ಪ್ರಕಟವಾದ ಬೆನ್ನಲ್ಲೇ ದಾನಿಗಳಲ್ಲಿ ಆತಂಕ ಮೂಡಿದ್ದು, ಆ ಬೆಳ್ಳಿಯನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗಿದೆಯೇ ಅಥವಾ ಬೇರೆ ಉದ್ದೇಶಕ್ಕೆ ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂಬ ಸ್ಪಷ್ಟನೆಗೆ ಆಗ್ರಹಿಸಿದ್ದಾರೆ.

 

ಇದೇ ವೇಳೆ ಲಖನೌ ಮೂಲದ ಇಂಡಿಯಾ ಬುಲಿಯನ್ ಅಂಡ್ ಜುವೆಲ್ಲರ್ಸ್ ಅಸೋಸಿಯೇಷನ್ (IBJA) ಉತ್ತರ ಭಾರತ ವಿಭಾಗದ ಮುಖ್ಯಸ್ಥ ಅನುರಾಗ್ ರಸ್ತೋಗಿ ಅವರೂ ಸಹ ಟ್ರಸ್ಟ್ ವಿರುದ್ಧ ಮತ್ತೊಂದು ಗಂಭೀರ ಪ್ರಶ್ನೆ ಎತ್ತಿದ್ದಾರೆ.

​ಮಂದಿರಕ್ಕೆ ದೇಣಿಗೆಯಾಗಿ ನೀಡಲಾಗಿದ್ದ 3 ಕೆಜಿ ತೂಕದ ಬೆಳ್ಳಿ ದೀಪ ಸೇರಿದಂತೆ ಇತರ ಬೆಳ್ಳಿ ವಸ್ತುಗಳ ಪ್ರಸ್ತುತ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.

​2020ರ ಆಗಸ್ಟ್‌ನಲ್ಲಿ ನಡೆದ ಭೂಮಿ ಪೂಜೆಯ ಸಂದರ್ಭದಲ್ಲಿ ಸಂಘಟನೆಯಿಂದ ನೀಡಲಾಗಿದ್ದ ಸುಮಾರು 39.26 ಕೆಜಿ ತೂಕದ ಬೆಳ್ಳಿ ವಸ್ತುಗಳ ಸುಳಿವೂ ಸದ್ಯಕ್ಕೆ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ.

 

ಸಾರ್ವಜನಿಕ ಹಾಗೂ ಧಾರ್ಮಿಕ ಉದ್ದೇಶಗಳಿಗಾಗಿ ಭಕ್ತರು ನೀಡುವ ಪ್ರತಿ ಪೈಸೆಯ ದೇಣಿಗೆಗೂ ಮಾಹಿತಿ ಪಡೆಯುವ ಹಕ್ಕು ದಾನಿಗಳಿಗೆ ಇದೆ. ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು. ಟ್ರಸ್ಟ್ ಅಥವಾ ಅಧಿಕಾರದ ದುರುಪಯೋಗ ನಡೆದು ಅಕ್ರಮ ಸಾಬೀತಾದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ದಾನಿಗಳು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin