ಭುವನೇಶ್ವರ್: ಹೊಸದಾಗಿ ನಿರ್ಮಿಸುತ್ತಿದ್ದ ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದ ಮನೆ ಮಾಲೀಕ, ಅವರ ಮಗ ಹಾಗೂ ಕಾರ್ಮಿಕರು ಸೇರಿ ಒಟ್ಟು ಆರು ಜನರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ಒಡಿಶಾದ ಕಲಾಹಂಡಿ ಜಿಲ್ಲೆಯ ಗೌಡಾ ಕಾರ್ಲಖುಂಟ ಗ್ರಾಮದಲ್ಲಿ ನಡೆದಿದೆ. ನಿರ್ಮಾಣ ಹಂತದ ಟ್ಯಾಂಕ್‌ನಲ್ಲಿದ್ದ ಸೆಂಟ್ರಿಂಗ್ ವಸ್ತುಗಳನ್ನು ಹೊರತೆಗೆಯಲು ಹೋದಾಗ ಈ ದುರಂತ ಸಂಭವಿಸಿದೆ.
ಗೌಡಾ ಕಾರ್ಲಖುಂಟ ಗ್ರಾಮದಲ್ಲಿ ಹೊಸದಾಗಿ ಶೌಚಾಲಯದ ಟ್ಯಾಂಕ್ ನಿರ್ಮಿಸಲಾಗುತ್ತಿತ್ತು. ಅದರ ಒಳಗಿದ್ದ ಸೆಂಟ್ರಿಂಗ್ ಮರ ಹಾಗೂ ಕಬ್ಬಿಣದ ವಸ್ತುಗಳನ್ನು ಹೊರತೆಗೆಯಲು ಮೊದಲು ಕಾರ್ಮಿಕರು ಟ್ಯಾಂಕ್ ಒಳಗೆ ಇಳಿದಿದ್ದಾರೆ. ಆದರೆ, ಟ್ಯಾಂಕ್ ಒಳಗಿದ್ದ ವಿಷಗಾಳಿಯ ಪ್ರಭಾವದಿಂದಾಗಿ ಕಾರ್ಮಿಕರು ಇಳಿದ ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ.
ಒಳಗೆ ಹೋದವರು ಎಷ್ಟು ಕೂಗಿದರೂ ಪ್ರತಿಕ್ರಿಯಿಸದಿದ್ದಾಗ, ಹೊರಗಿದ್ದವರು ಗಾಬರಿಗೊಂಡಿದ್ದಾರೆ. ಟ್ಯಾಂಕ್ ಒಳಗಿದ್ದವರನ್ನು ರಕ್ಷಿಸುವ ಧಾವಂತದಲ್ಲಿ ಮನೆ ಮಾಲೀಕ, ಅವರ ಮಗ ಹಾಗೂ ಮತ್ತಿತರರು ಒಬ್ಬರ ಹಿಂದೆ ಒಬ್ಬರಂತೆ ಟ್ಯಾಂಕ್ ಒಳಗೆ ಇಳಿದಿದ್ದಾರೆ. ಆದರೆ, ವಿಷಾನಿಲದ ತೀವ್ರತೆಗೆ ಒಳಗಿಳಿದವರೆಲ್ಲರೂ ಸ್ಥಳದಲ್ಲೇ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತರನ್ನು ಮೂವರು ಮೇಸ್ತ್ರಿಗಳು, ಒಬ್ಬ ಕಾರ್ಮಿಕ, ಮನೆ ಮಾಲೀಕ ಮತ್ತು ಅವರ ಮಗ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದ ತಕ್ಷಣ ಮದನ್‌ಪುರ ರಾಂಪುರ್ ಪೊಲೀಸರು ಮತ್ತು ರಕ್ಷಣಾ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಟ್ಯಾಂಕ್‌ನಿಂದ ಆರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸದ್ಯ ಮೃತದೇಹಗಳನ್ನು ಮದನ್‌ಪುರ ರಾಂಪುರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಗಾಯಗೊಂಡಿರುವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮದನ್‌ಪುರ ರಾಂಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.