ರಾಯಬಾಗ: ಮೊಬೈಲ್ ಅಂಗಡಿಯ ಕಿಟಕಿ ಮುರಿದು ಮೊಬೈಲ್ ಹಾಗೂ ನಗದು ಕಳುವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ರಾಯಬಾಗ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೇಖಳಿ ಗ್ರಾಮದ ಕ್ವಾಟೇಪ್ಪ ಲಗಮಪ್ಪ ಪೂಜೇರಿ (19) ಬಂಧಿತ ಆರೋಪಿ.
ಘಟನೆಯ ವಿವರ:
ದಿನಾಂಕ 28/06/2026 ರ ರಾತ್ರಿ 10.00 ಗಂಟೆಯಿಂದ 29/06/2026 ರ ಮುಂಜಾನೆ 8.00 ಗಂಟೆಯ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಅಂಗಡಿಯ ಕಿಟಕಿ ಮುರಿದು ಒಳಗಡೆ ನುಗ್ಗಿ, ಮೊಬೈಲ್ ಹಾಗೂ ಹಣ ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಕಂಕಣವಾಡಿ ನಿವಾಸಿ ರಾಮಚಂದ್ರ ಚಿಕ್ಕಯ್ಯ ಫರೀಟ್ ನೀಡಿದ ದೂರಿನನ್ವಯ ರಾಯಬಾಗ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 264/2026 ಕಲಂ: 305, 331(4) ಬಿಎನ್ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ಕಾರ್ಯಾಚರಣೆ ಹಾಗೂ ಜಪ್ತಿ:
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ (ಐ.ಪಿ.ಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್ ಬಿ. ಬಸರಗಿ ಹಾಗೂ ಅಥಣಿ ಉಪ-ವಿಭಾಗದ ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೋಳಿ ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ರಾಯಬಾಗ ಠಾಣೆ ಇನ್ಸ್ಪೆಕ್ಟರ್ ಎಮ್. ಎಮ್. ಡಪ್ಪಿನ್, ಪಿ.ಎಸ್.ಐ ಶಿವಾನಂದ ಮನ್ನಿಕೇರಿ, ಎಎಸ್ಐ ವಿ. ಬಿ. ದೇವಮಾನೆ ಹಾಗೂ ಸಿಬ್ಬಂದಿಗಳಾದ ಎಸ್. ಎಸ್. ಅರಭಾವಿ, ಆರೀಫ್ ಮುನ್ನಾಳ, ಡಿ.ಟಿ. ಶಾನವಾಡ, ಸಪ್ತಸಾಗರೆ ಮತ್ತು ಬೆಳಗಾವಿ ಟೆಕ್ನಿಕಲ್ ಸೆಲ್ನ ಸಚಿನ್ ಪಾಟೀಲ್ ಒಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತನಿಂದ ₹26,000 ಮೌಲ್ಯದ ವಿವೋ ಮೊಬೈಲ್, ₹18,000 ಮೌಲ್ಯದ ಲಾವಾ ಮೊಬೈಲ್ ಹಾಗೂ ₹1,000 ಮೌಲ್ಯದ ಬ್ಲೂಟೂತ್ ಸೇರಿ ಒಟ್ಟು ₹45,000 ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದರಿ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.