Skip to main content

Police Roundup

ಪೊಲೀಸರ ಬಗ್ಗೆ ಅಪಹಾಸ್ಯ ಮಾಡಿ ರೀಲ್ಸ್ ಮಾಡಿದ್ದ ಇಬ್ಬರು ಯುವಕರು ಶಿವಮೊಗ್ಗ ಸಂಚಾರಿ ಪೊಲೀಸರ ವಶಕ್ಕೆ!

Share News

ಶಿವಮೊಗ್ಗ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಅಪಹಾಸ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹರಿಬಿಟ್ಟಿದ್ದ ಇಬ್ಬರು ಯುವಕರನ್ನು ಶಿವಮೊಗ್ಗ ಸಂಚಾರಿ ಪೊಲೀಸರು ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

 

ಹೆಲ್ಮೇಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಇಬ್ಬರು ಯುವಕರು, ರಸ್ತೆಯಲ್ಲಿ ಸಾಗುವಾಗ ರೀಲ್ಸ್ ವಿಡಿಯೋ ಮಾಡಿಕೊಂಡಿದ್ದಾರೆ. ಈ ವೇಳೆ ಬೈಕ್ ಸವಾರ ಹಾಗೂ ಹಿಂಬದಿ ಸವಾರ ಸೇರಿಕೊಂಡು, ಅಲ್ಲೇ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಪಕ್ಕದಲ್ಲಿ ಮೊಪೆಡ್‌ನಲ್ಲಿ ಸಂಚರಿಸುತ್ತಿದ್ದ ಮಹಿಳಾ ಸವಾರರನ್ನು ಅಪಹಾಸ್ಯ ಮಾಡಿ ವಿಕೃತ ಆನಂದ ಪಟ್ಟಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಈ ದೃಶ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಮಜಾ ಉಡಾಯಿಸಿದ್ದರು.

 

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಶಿವಮೊಗ್ಗ ಸಂಚಾರಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಂಚಾರಿ ಸಿಪಿಐ ದೇವರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ವಿಡಿಯೋ ಆಧರಿಸಿ ಇಬ್ಬರೂ ಯುವಕರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಯುವಕರು ಬಳಸಿದ್ದ ಮೊಪೆಡ್ (ವಾಹನ) ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ.

 

ಪೊಲೀಸರ ಬಗ್ಗೆ ಕೀಳಾಗಿ ನಡೆದುಕೊಂಡ ಯುವಕರಿಗೆ ಕಾನೂನಿನ ರೀತಿ ಸರಿಯಾಗಿಯೇ ಪಾಠ ಕಲಿಸಲಾಗಿದೆ. ತಪ್ಪು ಒಪ್ಪಿಕೊಂಡ ಯುವಕರು ಸಾರ್ವಜನಿಕವಾಗಿ ಕ್ಷಮೆ ಕೇಳುವ ವಿಡಿಯೋವನ್ನು ಮಾಡಿಸಿದ ಪೊಲೀಸರು, ಅದನ್ನು ಅದೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಇಂತಹ ಪುಂಡ ಪೋಕರಿಗಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

 

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕಾಗಿ ಅಥವಾ ಲೈಕ್ಸ್‌ಗಳಿಗಾಗಿ ಕಾನೂನು ಕೈಗೆತ್ತಿಕೊಳ್ಳುವುದು, ಕರ್ತವ್ಯ ನಿರತ ಪೊಲೀಸರನ್ನು ಹಾಗೂ ಮಹಿಳಾ ಸವಾರರನ್ನು ಅಪಹಾಸ್ಯ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin