ಉಡುಪಿ: ಅಲೆವೂರು ಗ್ರಾಮದ ಕೆಸ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಗಿ ಪರಿಸರದಲ್ಲಿರುವ ಬಾಳೆಹಣ್ಣಿನ ರಖಂ ವ್ಯಾಪಾರಸ್ಥರು ಮತ್ತು ದಾಸ್ತಾನುದಾರರ ಗೋದಾಮುಗಳ ಮೇಲೆ ಅಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆ ಏಕಕಾಲದಲ್ಲಿ ಭರ್ಜರಿ ದಾಳಿ ನಡೆಸಿದೆ. ಬಾಳೆಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ಬಳಸಲಾಗುತ್ತಿದ್ದ ಹಾನಿಕಾರಕ ರಾಸಾಯನಿಕಗಳು ಹಾಗೂ ಕೃತಕ ಬಣ್ಣಗಳನ್ನು ಜಪ್ತಿ ಮಾಡಲಾಗಿದೆ.
ಸಹಾಯಕ ಕಮಿಷನರ್ (ಎಸಿ) ರಶ್ಮಿ ಎಸ್.ಆರ್. ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಈ ಜಂಟಿ ಕಾರ್ಯಾಚರಣೆ ನಡೆಸಿದ್ದು, ಅಲೆವೂರು ವ್ಯಾಪ್ತಿಯ ಸುಮಾರು ೩ ರಿಂದ ೪ ಗೋದಾಮುಗಳ ಮೇಲೆ ಪರಿಶೀಲನೆ ನಡೆಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ರಾಸಾಯನಿಕ ಹಾಗೂ ಬಣ್ಣ ಬಳಕೆ ಮಾಡುತ್ತಿದ್ದುದು ಕಂಡುಬಂದ ಹಿನ್ನೆಲೆಯಲ್ಲಿ ಹಲವು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಾಳಿ ವೇಳೆಯಲ್ಲಿ ರಾಸಾಯನಿಕ ಸಿಂಪಡಣೆಗೆ ಬಳಸುತ್ತಿದ್ದ ಪರಿಕರಗಳು ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾದ ಕೆಮಿಕಲ್ ಬಳಸಿ ಕೃತಕವಾಗಿ ಬಾಳೆಹಣ್ಣುಗಳನ್ನು ಹಣ್ಣಾಗಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.