ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತವರು ಮನೆಯಲ್ಲಿದ್ದ ಪತ್ನಿಯನ್ನು ವಾಪಸ್ ಕರೆತರಲು ಹೋದ ಪತಿಯ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬಾಬುಸಾಬ್ ಜಮಾದಾರ್ (35) ಕೊಲೆಯಾದ ದುರ್ದೈವಿ ಪತಿ. ಗಲಾಟೆ ವೇಳೆ ತಡೆಯಲು ಬಂದ ಇವರ ಸ್ನೇಹಿತ ಅಪ್ಪಾಲಾಲ ಮಕಾಸಿ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಬಾಬುಸಾಬ್ ಜಮಾದಾರ್ ಐದು ವರ್ಷಗಳ ಹಿಂದೆ ತನ್ನ ಸ್ವಂತ ಸಹೋದರಿಯ ಮಗಳಾದ ಸೌಂದರ್ಯ ಎಂಬಾಕೆಯನ್ನು ವಿವಾಹವಾಗಿದ್ದನು. ಆರಂಭದಲ್ಲಿ ಸುಖವಾಗಿದ್ದ ದಾಂಪತ್ಯದಲ್ಲಿ ಇತ್ತೀಚೆಗೆ ಕೌಟುಂಬಿಕ ಮನಸ್ತಾಪಗಳು ಶುರುವಾಗಿದ್ದವು. ಈ ಕಲಹದ ಕಾರಣದಿಂದಾಗಿ ಪತ್ನಿ ಸೌಂದರ್ಯ ಕಳೆದ ಐದು ತಿಂಗಳುಗಳಿಂದ ಪತಿಯನ್ನು ಬಿಟ್ಟು ಹಲಸಂಗಿ ಗ್ರಾಮದಲ್ಲಿರುವ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು.
ಭಾನುವಾರ ರಾತ್ರಿ ಪತ್ನಿ ಸೌಂದರ್ಯಳನ್ನು ಮನವೊಲಿಸಿ ವಾಪಸ್ ಮನೆಗೆ ಕರೆದುಕೊಂಡು ಹೋಗಲು ಬಾಬುಸಾಬ್ ತನ್ನ ಸ್ನೇಹಿತ ಅಪ್ಪಾಲಾಲ ಮಕಾಸಿ ಜೊತೆಗೆ ಹಲಸಂಗಿ ಗ್ರಾಮಕ್ಕೆ ಬಂದಿದ್ದನು. ಈ ವೇಳೆ ಪತ್ನಿಯ ಮನೆಯವರೊಂದಿಗೆ ಸಂಧಾನ ನಡೆಸುವಾಗ ಎರಡೂ ಕುಟುಂಬಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದಾಗ, ಪತ್ನಿ ಸೌಂದರ್ಯ, ಆಕೆಯ ತಾಯಿ ಮೀನಾಕ್ಷಿ, ಸಹೋದರ ವಿಕಾಸ್ ಹಾಗೂ ರಫೀಕ್ ಎಂಬುವವರು ಸೇರಿ ಬಾಬುಸಾಬ್ ಹಾಗೂ ಆತನ ಸ್ನೇಹಿತನ ಮೇಲೆ ಏಕಾಏಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ತೀವ್ರತೆಗೆ ಬಾಬುಸಾಬ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದಾನೆ.
ಘಟನೆ ನಡೆದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಪರಶುರಾಮ ಮನಗೂಳಿ ಹಾಗೂ ಝಳಕಿ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಝಳಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಪತ್ನಿ ಸೌಂದರ್ಯ ಹಾಗೂ ಆಕೆಯ ಕುಟುಂಬಸ್ಥರ ಬಂಧನಕ್ಕಾಗಿ ಪೊಲೀಸರು ತೀವ್ರ ಬಲೆ ಬೀಸಿದ್ದಾರೆ. ತವರು ಮನೆಗೆ ಪತ್ನಿಯನ್ನು ಕರೆತರಲು ಹೋದ ಪತಿ ಹೆಣವಾಗಿ ಮರಳಿದ ಘಟನೆ ಸ್ಥಳೀಯವಾಗಿ ತೀವ್ರ ಆಘಾತವನ್ನುಂಟು ಮಾಡಿದೆ.
ವರದಿ: ಹಣಮಂತರಾಯ ಕುಲಕರ್ಣಿ (ಗುಂಡು), ಸಿಂದಗಿ, ವಿಜಯಪುರ.