ಶಹಜಹಾನ್ಪುರ (ಉತ್ತರ ಪ್ರದೇಶ): ಹಣದ ಹಪಾಹಪಿಗೆ ಬಿದ್ದ ಮನುಷ್ಯ ಎಂತಹ ಅಮಾನವೀಯ ಕೃತ್ಯಕ್ಕೂ ಹೇಸುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾದ ಘಟನೆಯೊಂದು ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಕೇವಲ 19,300 ರೂಪಾಯಿಗಳನ್ನು ಪಡೆಯಲು ವ್ಯಕ್ತಿಯೊಬ್ಬ ಆಕೆಯ ಅಸ್ಥಿಪಂಜರವನ್ನೇ ಅಗೆದು ತೆಗೆದು ಬ್ಯಾಂಕಿಗೆ ಹೊತ್ತು ತಂದಿದ್ದಾನೆ!
ಜಿಲ್ಲೆಯ ಭಾನ್ಪುರ ಗ್ರಾಮದ ನಿವಾಸಿ ಪರಶುರಾಮ್ ಎಂಬಾತನೇ ಈ ವಿಚಿತ್ರ ಕೃತ್ಯವೆಸಗಿದವನು. ಈತನ ತಂಗಿ ಸುಮಾರು ಮೂರು ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಆಕೆಯ ಬ್ಯಾಂಕ್ ಖಾತೆಯಲ್ಲಿ 19,300 ರೂಪಾಯಿ ಹಣ ಬಾಕಿ ಇತ್ತು. ಆ ಹಣವನ್ನು ಪಡೆಯಲು ಪರಶುರಾಮ್ ಹಲವು ಬಾರಿ ಬ್ಯಾಂಕಿಗೆ ಅಲೆದಾಡಿದ್ದರೂ, ತಾಂತ್ರಿಕ ಕಾರಣಗಳಿಂದ ಹಣ ಸಿಕ್ಕಿರಲಿಲ್ಲ.
ಕೊನೆಗೆ ಒಂದು ವಿಚಿತ್ರ ಉಪಾಯ ಮಾಡಿದ ಪರಶುರಾಮ್, ತಂಗಿ ಬದುಕಿದ್ದಾಳೆ ಎಂದು ಬ್ಯಾಂಕ್ ಅಧಿಕಾರಿಗಳನ್ನು ನಂಬಿಸಲು ನಿರ್ಧರಿಸಿದ. ಇದಕ್ಕಾಗಿ ತಂಗಿಯ ಶವ ಹೂತಿದ್ದ ಜಾಗಕ್ಕೆ ಹೋಗಿ ಮಣ್ಣು ಅಗೆದು, ಅಸ್ಥಿಪಂಜರವನ್ನು ಹೊರತೆಗೆದಿದ್ದಾನೆ. ಅದನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ನೇರವಾಗಿ ಆರ್ಯವ್ರತ ಗ್ರಾಮೀಣ ಬ್ಯಾಂಕಿಗೆ ಬಂದಿಳಿದಿದ್ದಾನೆ.
ಬ್ಯಾಂಕಿನ ಒಳಗೆ ಅಸ್ಥಿಪಂಜರದೊಂದಿಗೆ ಪ್ರತ್ಯಕ್ಷವಾದ ಪರಶುರಾಮ್ನನ್ನು ಕಂಡು ಅಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. “ನನ್ನ ತಂಗಿ ಇಲ್ಲೇ ಇದ್ದಾಳೆ ನೋಡಿ, ಆಕೆಯ ಖಾತೆಯ ಹಣವನ್ನು ನನಗೆ ನೀಡಿ” ಎಂದು ಹಠ ಹಿಡಿದಿದ್ದಾನೆ. ಈ ಭೀಕರ ದೃಶ್ಯದಿಂದ ಕಂಗೆಟ್ಟ ಬ್ಯಾಂಕ್ ಮ್ಯಾನೇಜರ್ ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ “ತಾನು ಬಡತನದಲ್ಲಿದ್ದು, ಹಣದ ಅನಿವಾರ್ಯತೆ ಇರುವುದರಿಂದ ಈ ರೀತಿ ಮಾಡಿದೆ” ಎಂದು ಆತ ಹೇಳಿಕೆ ನೀಡಿದ್ದಾನೆ. ಸದ್ಯ ಪೊಲೀಸರು ಅಸ್ಥಿಪಂಜರವನ್ನು ವಾಪಸ್ ಪಡೆದು ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಲು ವ್ಯವಸ್ಥೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.