ಚಿಕ್ಕಬಳ್ಳಾಪುರ: ವಿವಾಹಿತ ಮಹಿಳೆಯೊಬ್ಬರಿಗೆ ಮೈಯೊರೆಸುವ ಮತ್ತಿನ ಔಷಧಿ ನೀಡಿ ಅತ್ಯಾಚಾರ ಎಸಗಿ, ಬಳಿಕ ಆಕೆಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ಲೈಂಗಿಕ ದೌರ್ಜನ್ಯ ಹಾಗೂ ಹಣದ ಬೇಡಿಕೆ ಇಟ್ಟಿದ್ದ ಕೃತ್ಯವೊಂದು ಜಿಲ್ಲೆಯ ಶಿಡ್ಲಘಟ್ಟದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಮಂಡ್ಯ ಮೂಲದ ರಮೇಶ್ ಎಂಬಾತನ ವಿರುದ್ಧ ಇದೀಗ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ತನ್ನ ಚಿಕ್ಕಮ್ಮನ ಮನೆಗೆ ಸಂತ್ರಸ್ತೆ ಆಗಾಗ್ಗೆ ಹೋಗಿ ಬರುತ್ತಿದ್ದರು. ಈ ವೇಳೆ ಪರಿಚಯವಾಗಿದ್ದ ಆರೋಪಿ ರಮೇಶ್, ಮಹಿಳೆಯೊಂದಿಗೆ ಆಪ್ತತೆ ಬೆಳೆಸಿಕೊಂಡಿದ್ದ. ಒಂದು ದಿನ ನಂಬಿಕೆ ದ್ರೋಹ ಬಗೆದ ಆರೋಪಿ, ಮಹಿಳೆಯನ್ನು ತನ್ನ ಮನೆಗೆ ಕರೆದೊಯ್ದು ಜ್ಯೂಸ್‌ನಲ್ಲಿ ಮತ್ತಿನ ಔಷಧಿ ಬೆರೆಸಿ ಕುಡಿಸಿದ್ದಾನೆ. ಮಹಿಳೆ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆ ಬಳಿಕ ತನ್ನ ಅಸಲಿ ರೂಪ ತೋರಿಸಿದ ಆರೋಪಿ ರಮೇಶ್, ಈ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಹಾಗೂ ನಿನ್ನ ಕುಟುಂಬದವರಿಗೆ ಕಳುಹಿಸಿಕೊಡುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಮಾನಹಾನಿಯಾಗುವ ಭಯದಿಂದ ನೊಂದ ಮಹಿಳೆ ಮೌನವಾಗಿದ್ದನ್ನೇ ಬಂಡವಾಳ ಮಾಡಿಕೊಂಡ ಕಾಮುಕ, ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಲೈಂಗಿಕ ಶೋಷಣೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ವಿಡಿಯೋ ಡಿಲೀಟ್ ಮಾಡಲು ಹಾಗೂ ಯಾರಿಗೂ ತಿಳಿಸದಿರಲು ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣಗಳನ್ನು ದೋಚಿ ವಂಚಿಸಿದ್ದಾನೆ ಎನ್ನಲಾಗಿದೆ.
ಆರೋಪಿಯ ನಿರಂತರ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಮಹಿಳೆ, ಧೈರ್ಯ ಮಾಡಿ ತನ್ನ ಪತಿಗೆ ಸಂಪೂರ್ಣ ವಿಷಯವನ್ನು ತಿಳಿಸಿದ್ದಾರೆ. ಪತ್ನಿಯ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಕೆಗೆ ಬೆಂಬಲವಾಗಿ ನಿಂತ ಪತಿ, ಕೂಡಲೇ ಪೊಲೀಸರ ಬಳಿ ಕರೆದೊಯ್ದಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನನ್ವಯ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ತಲೆಮರೆಸಿಕೊಂಡಿರುವ ಆರೋಪಿ ರಮೇಶ್ ಪತ್ತೆಗಾಗಿ ಜಾಲ ಬೀಸಿದ್ದಾರೆ.