ನಾಗ್ಪುರ: ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧ ಎನ್ನುವ ಪ್ರೇಮಿಗಳ ಕಥೆಯನ್ನು ಕೇಳಿರುತ್ತೀರಿ, ಆದರೆ ಮಹಾರಾಷ್ಟ್ರದ ನಾಗ್ಪುರದಲ್ಲಿ ತಮ್ಮ ಗೆಳತಿಯರಿಗೆ ಐಫೋನ್ ಗಿಫ್ಟ್ ನೀಡಲು ಇಬ್ಬರು ರೋಮಿಯೋಗಳು ಮಾಡಿರುವ ವಿಲಕ್ಷಣ ಕಳ್ಳತನದ ಕಥೆ ಕೇಳಿದರೆ ನೀವೂ ದಂಗಾಗುತ್ತೀರಿ! ಬರೋಬ್ಬರಿ 6.5 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ನಲ್ಲಿಗಳನ್ನು (Luxury Taps) ಕದ್ದ ಕಳ್ಳರು, ವಿಚಾರಣೆ ವೇಳೆ ನೀಡಿರುವ ಟ್ವಿಸ್ಟ್ ಕೇಳಿ ಪೊಲೀಸರೇ ತಲೆ ಕೆರೆದುಕೊಳ್ಳುವಂತಾಗಿದೆ.
ನಾಗ್ಪುರದ ಪ್ರಸಿದ್ಧ ‘ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಟೈಲ್ಸ್ ಹಾಗೂ ಸ್ಯಾನಿಟರಿ ವೇರ್ ಶೋರೂಂನಲ್ಲಿ ಮೇ 27ರ ಮಧ್ಯರಾತ್ರಿ ಈ ಹೈಟೆಕ್ ಕಳ್ಳತನ ನಡೆದಿತ್ತು. ಅಂಗಡಿಯ ಮೇಲ್ಛಾವಣಿಯ ತಗಡಿನ ಶೀಟ್ಗಳನ್ನು ಅತ್ಯಂತ ಚಾಣಾಕ್ಷತನದಿಂದ ತೆಗೆದು ಒಳನುಗ್ಗಿದ ಇಬ್ಬರು ಅಪ್ರಾಪ್ತ ಯುವಕರು, ಅಲ್ಲಿದ್ದ ದುಬಾರಿ ಬೆಲೆಯ 21 ನಲ್ಲಿಗಳನ್ನು ಕದ್ದೊಯ್ದಿದ್ದರು. ಕಳವಾದ ವಸ್ತುಗಳಲ್ಲಿ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ‘ಚಿನ್ನದ ವಿನ್ಯಾಸದ’ (Gold Plated) 5 ನಲ್ಲಿಗಳು ಸೇರಿದಂತೆ ಅತ್ಯಂತ ಆಕರ್ಷಕ ರೋಸ್ ಗೋಲ್ಡ್ ಮತ್ತು ಸಿಲ್ವರ್ ಬಣ್ಣದ ಐಷಾರಾಮಿ ನಲ್ಲಿಗಳಿದ್ದವು. ಅಂಗಡಿ ಮಾಲೀಕ ರಾಹುಲ್ ಜಯಚಂದ್ ಬಾತ್ರಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಅಸಲಿ ಶಾಕ್ ಕಾದಿತ್ತು. ಕಳ್ಳತನ ಮಾಡಿದ ಅಪ್ರಾಪ್ತ ಯುವಕರಿಗೆ ಆ ಐಷಾರಾಮಿ ನಲ್ಲಿಗಳ ನಿಜವಾದ ಮೌಲ್ಯವೇ ತಿಳಿದಿರಲಿಲ್ಲ! ಮಾರುಕಟ್ಟೆಯಲ್ಲಿ ಬರೋಬ್ಬರಿ 6.5 ಲಕ್ಷ ರೂ. ಬಾಳುವ ಆ ಚಿನ್ನದ ಲೇಪಿತ ನಲ್ಲಿಗಳನ್ನು ಈ ಕಿಲಾಡಿಗಳು ಗುಜರಿ ಅಂಗಡಿಗೆ ಕೇವಲ 20 ಸಾವಿರ ರೂಪಾಯಿಗೆ ಮಾರಿ ಕೈತೊಳೆದುಕೊಂಡಿದ್ದರು!
ಘಟನೆ ನಡೆದ ಕೇವಲ 12 ಗಂಟೆಗಳ ಒಳಗೆ ಕಾರ್ಯಾಚರಣೆ ನಡೆಸಿದ ನಾಗ್ಪುರ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 20 ರಿಂದ 35 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿದ ಪೊಲೀಸರು ಇಬ್ಬರು ಅಪ್ರಾಪ್ತ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಕದ್ದ ಮಾಲನ್ನು ಕರಗಿಸಲು ಖರೀದಿಸಿದ್ದ 38 ವರ್ಷದ ಇರ್ಫಾನ್ ಅಲಿ ಎಂಬ ಗುಜರಿ ವ್ಯಾಪಾರಿಯನ್ನೂ ಬಂಧಿಸಲಾಗಿದೆ. ಕಳವಾಗಿದ್ದ ಎಲ್ಲಾ 6.5 ಲಕ್ಷ ಮೌಲ್ಯದ ಐಷಾರಾಮಿ ನಲ್ಲಿಗಳನ್ನು ಪೊಲೀಸರು ಸದ್ಯ ವಶಪಡಿಸಿಕೊಂಡಿದ್ದಾರೆ.
ಬಂಧಿತ ಅಪ್ರಾಪ್ತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕಥೆ ಹೊರಬಂದಿದೆ. “ನಮ್ಮ ಗೆಳತಿಯರಿಗೆ ದುಬಾರಿ ಐಫೋನ್ಗಳನ್ನು ಉಡುಗೊರೆಯಾಗಿ ನೀಡಲು ನಮಗೆ ತಕ್ಷಣ ಹಣದ ಅಗತ್ಯವಿತ್ತು. ಅದಕ್ಕಾಗಿಯೇ ಈ ಕಳ್ಳತನ ಮಾಡಿದೆವು” ಎಂದು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
ಗೆಳತಿಯರಿಗೆ ಐಫೋನ್ ಕೊಡಿಸಲು ಹೋಗಿ, ಲಕ್ಷಾಂತರ ರೂಪಾಯಿ ಬೆಲೆಯ ಗೋಲ್ಡ್ ನಲ್ಲಿಗಳನ್ನು ಗುಜರಿ ರೇಟಿಗೆ ಮಾರಿ, ಈಗ ಪೊಲೀಸರ ಅತಿಥಿಯಾಗಿರುವ ಈ ‘ಪ್ರೇಮ ಪಕ್ಷಿಗಳ’ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.