ಮಹಾರಾಷ್ಟ್ರ: “ದೇಶಕ್ಕೆ ಅನ್ನ ನೀಡುವ ರೈತನ ಕಷ್ಟಗಳು ಯಾರಿಗೂ ಬೇಡ” ಎಂಬ ಮಾತಿಗೆ ಕನ್ನಡಿ ಹಿಡಿಯುವಂತ ಅತ್ಯಂತ ದಾರುಣ ಹಾಗೂ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕೃಷಿ ಹಂಗಾಮು ಆರಂಭವಾಗಿರುವ ಬೆನ್ನಲ್ಲೇ ಇದ್ದ ಒಂದು ಎತ್ತು ಸಾವನ್ನಪ್ಪಿದ್ದರಿಂದ, ಮತ್ತೊಂದು ಎತ್ತು ಕೊಳ್ಳಲಾಗದೆ ಬಡ ರೈತನೊಬ್ಬ ತನ್ನ ಪತ್ನಿಯ ಹೆಗಲಿಗೇ ನೊಗ ಹೊರಿಸಿ ಹೊಲ ಉಳುಮೆ ಮಾಡಿದ್ದಾನೆ.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದಿಯೋನಿ ತಾಲೂಕಿನ ಬಂಬಾಲಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ರೈತ ಕುಟುಂಬದ ಈ ದುಃಸ್ಥಿತಿಯನ್ನು ಕಂಡು ಇಡೀ ದೇಶದ ನೆಟ್ಟಿಗರು ಮರುಗಿದ್ದಾರೆ.
ಬಂಬಲಿ ಗ್ರಾಮದ ಬಡ ರೈತ ಕಾಶಿನಾಥ್ ಗಾಯಕ್ವಾಡ್ ಅವರಿಗೆ ಸೇರಿದ ಒಂದು ಎತ್ತು ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಸಿಡಿಲಿನ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿತ್ತು. ಮಳೆಗಾಲದ ಆರಂಭದಲ್ಲೇ ಇಡೀ ಸಂಸಾರದ ಜೀವನೋಪಾಯಕ್ಕೆ ಆಧಾರವಾಗಿದ್ದ ಎತ್ತು ಸಾವನ್ನಪ್ಪಿದ್ದು ಕುಟುಂಬಕ್ಕೆ ದೊಡ್ಡ ಆಘಾತ ತಂದಿತ್ತು. ಕೈಯಲ್ಲಿ ಕಾಸಿಲ್ಲದೆ, ಕೃಷಿ ಕೆಲಸಗಳು ಅರ್ಧಕ್ಕೆ ನಿಂತುಹೋಗುವ ಆತಂಕ ಎದುರಾಗಿತ್ತು.
ಇಂದಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಬಡ ರೈತರಿಗೆ ಟ್ರ್ಯಾಕ್ಟರ್ ಬಾಡಿಗೆ ಕಟ್ಟುವುದಿರಲಿ, ಮಾರುಕಟ್ಟೆಯಲ್ಲಿ ಮತ್ತೊಂದು ಎತ್ತನ್ನು ಖರೀದಿಸುವ ಆರ್ಥಿಕ ಸಾಮರ್ಥ್ಯವೂ ಇರುವುದಿಲ್ಲ. ಕಾಶಿನಾಥ್ ಅವರ ಪರಿಸ್ಥಿತಿಯೂ ಹಾಗೇ ಇತ್ತು. ಸಾಲ ಮಾಡಿ ಮತ್ತೊಂದು ಎತ್ತು ತರಲು ಸಾಧ್ಯವಾಗದಿದ್ದಾಗ, ಅನಿವಾರ್ಯವಾಗಿ ನೇಗಿಲಿನ ಒಂದು ಬದಿಗೆ ಇದ್ದ ಒಂದು ಎತ್ತನ್ನು ಕಟ್ಟಿ, ಇನ್ನೊಂದು ಬದಿಗೆ ಹೆಂಡತಿಯ ಭುಜದ ಮೇಲೆ ನೊಗ ಇಟ್ಟು ಹೊಲದಲ್ಲಿ ಉಳುಮೆ ಮಾಡಿದ್ದಾರೆ.
ಹೆಗಲ ಮೇಲೆ ನೊಗ ಹೊತ್ತು ಭಾರವಾದ ನೇಗಿಲನ್ನು ಎಳೆಯುತ್ತಿದ್ದರೆ, ರೈತ ಕಾಶಿನಾಥ್ ಹಿಂದೆ ನಿಂತು ನೇಗಿಲು ಹಿಡಿದು ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿವೆ. ಈ ದೃಶ್ಯವನ್ನು ನೋಡಿದ ಸಾರ್ವಜನಿಕರು ಹಾಗೂ ರೈತ ಸಂಘಟನೆಗಳು ಕಣ್ಣೀರು ಹಾಕಿದ್ದು, ಸರ್ಕಾರಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂದಿಗೂ ಗ್ರಾಮೀಣ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರ ಬದುಕು ಎಷ್ಟು ದುಸ್ತರವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ತಕ್ಷಣವೇ ಅಲ್ಲಿನ ಸ್ಥಳೀಯ ಆಡಳಿತ ಹಾಗೂ ಸರ್ಕಾರ ಈ ಬಡ ರೈತ ಕುಟುಂಬದ ನೆರವಿಗೆ ಧಾವಿಸಿ, ಸೂಕ್ತ ಪರಿಹಾರ ಹಾಗೂ ಕೃಷಿ ಉಪಕರಣಗಳ ಸಹಾಯ ನೀಡಬೇಕು ಎಂದು ದೇಶಾದ್ಯಂತ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.