Police Roundup

ಬೀದರ್: ಕಿರುತೆರೆ ಕಲಾವಿದ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸಿದ್ಧಾರ್ಥ್ ಪರಸನೋರ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಸಾವು!

Share News

ಬೀದರ್: ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ಕಾರ್ಯಕ್ರಮಗಳಾದ ‘ಕಾಮಿಡಿ ಕಿಲಾಡಿಗಳು’ ಹಾಗೂ ‘ಮಜಾಭಾರತ’ ಮೂಲಕ ಮನೆಮಾತಾಗಿದ್ದ ಕಲಾವಿದ ಸಿದ್ಧಾರ್ಥ್ ಪರಸನೋರ (36) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

​ಇಲ್ಲಿನ ಹುಮನಾಬಾದ್ ತಾಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿದ್ದು, ಕಿರುತೆರೆ ಲೋಕ ಹಾಗೂ ಅಭಿಮಾನಿಗಳಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.

 

ಮೂಲತಃ ಹುಮನಾಬಾದ್ ನಗರದ ಟೀಚರ್ಸ್ ಕಾಲೋನಿಯ ನಿವಾಸಿಯಾದ ಸಿದ್ಧಾರ್ಥ್ ಅವರು, ಜೂನ್ 13ರಂದು ಸ್ನೇಹಿತರೊಂದಿಗೆ ಸೇರಿ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ಹೋಗಿದ್ದ ಸಿದ್ಧಾರ್ಥ್ ಮೂರು ದಿನಗಳಾದರೂ ಮನೆಗೆ ವಾಪಸ್ ಬಾರದೆ, ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ನಿನ್ನೆ (ಸೋಮವಾರ) ಬೆಳಿಗ್ಗೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

 

ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಹುಮನಾಬಾದ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಿದ್ಧಾರ್ಥ್ ಅವರ ಮೊಬೈಲ್ ನಂಬರ್‌ನ ಟವರ್ ಲೊಕೇಶನ್ ಆಧರಿಸಿ ಮಾಹಿತಿ ಕಲೆಹಾಕಿ, ಶೋಧ ಕಾರ್ಯ ಆರಂಭಿಸಿದ್ದರು. ಈ ವೇಳೆ ಮೊಬೈಲ್ ಸಿಗ್ನಲ್ ತೋರಿಸುತ್ತಿದ್ದ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

 

ಹಾಸ್ಯ ನಟ ಸಿದ್ಧಾರ್ಥ್ ಅವರ ಸಾವಿಗೆ ನಿಖರ ಕಾರಣ ಏನೆಂಬುದು ಸದ್ಯಕ್ಕೆ ನಿಗೂಢವಾಗಿದೆ. ಇದು ಕೌಟುಂಬಿಕ ಸಮಸ್ಯೆಯಿಂದಾದ ಆತ್ಮಹತ್ಯೆಯೋ, ಅಪಘಾತವೋ ಅಥವಾ ಸ್ನೇಹಿತರ ನಡುವಿನ ಕಲಹದ ಹಿನ್ನೆಲೆಯಲ್ಲಿ ನಡೆದ ಕೊಲೆಯೋ ಎಂಬ ಹಲವು ಅನುಮಾನಗಳು ಮೂಡಿವೆ.

​ಘಟನೆಗೆ ಸಂಬಂಧಿಸಿದಂತೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿನ ಅಸಲಿ ರಹಸ್ಯ ಹೊರಬರಬೇಕಿದೆ. ಪೊಲೀಸರು ಸಿದ್ಧಾರ್ಥ್ ಅವರ ಸ್ನೇಹಿತರನ್ನು ಹಾಗೂ ಕೊನೆಯದಾಗಿ ಸಂಪರ್ಕದಲ್ಲಿದ್ದವರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.

 

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin