ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ೯ ಕೋಟಿ ರೂಪಾಯಿ ನಗದನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಆಗಸ್ಟ್ ೧೮ರಂದು ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಸಿಗ್ನಲ್ ಬಳಿ ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಂದ ಬಂದ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಂಶಯಾಸ್ಪದ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಭಾರಿ ಪ್ರಮಾಣದ ಹಣ ಪತ್ತೆಯಾಗಿದೆ.
ಸದರಿ ನಗದು ಹಾಗೂ ಕಾರನ್ನು ವಶಕ್ಕೆ ಪಡೆದ ಪೊಲೀಸರು ಚಾಲಕ ಹಾಗೂ ಪ್ರಯಾಣಿಕರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಈ ಹಣವು ತಮಿಳುನಾಡಿನ ತೂತುಕುಡಿಯ ‘ಸಿಂಧು ಜ್ಯುವೆಲ್ಲರ್ಸ್’ ಮಾಲೀಕ ಸಚಿನ್ ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಮನೆಯಲ್ಲಿ ಮತ್ತೆ ೧.೩ ಕೋಟಿ ರೂ. ಪತ್ತೆ:
ಪೊಲೀಸರು ವಶಕ್ಕೆ ಪಡೆದ ಸಚಿನ್‌ನನ್ನು ತಕ್ಷಣವೇ ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಐಟಿ ಅಧಿಕಾರಿಗಳು ಸಚಿನ್ ಅವರ ನಿವಾಸದ ಮೇಲೆಯೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಅಲ್ಲಿ ಹೆಚ್ಚುವರಿಯಾಗಿ ೧.೩ ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.
ಸದ್ಯ ಕಾರಿನಲ್ಲಿ ಸಿಕ್ಕ ೯ ಕೋಟಿ ರೂ. ಹಾಗೂ ಮನೆಯಲ್ಲಿ ಜಪ್ತಿಯಾದ ೧.೩ ಕೋಟಿ ರೂ. ಸೇರಿ ಒಟ್ಟು ೧೦.೩ ಕೋಟಿ ರೂಪಾಯಿ ನಗದಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡುವಂತೆ ಅಧಿಕಾರಿಗಳು ಸೂಚಿಸಿದ್ದು, ಪರಿಶೀಲನೆ ಕಾಯ್ದಿರಿಸಿದ್ದಾರೆ. ಈ ಭಾರಿ ಪ್ರಮಾಣದ ಹಣದ ಮೂಲ ಮತ್ತು ಅದನ್ನು ಸಾಗಿಸುತ್ತಿದ್ದ ಉದ್ದೇಶದ ಕುರಿತು ಐಟಿ ಇಲಾಖೆ ತನಿಖೆ ಮುಂದುವರಿಸಿದೆ.