Skip to main content

Police Roundup

ಸೆಸ್ಕಾಂ ಎಂಡಿಯಾಗಿ ಮತ್ತೆ ಅರ್ಚನಾ ಅಧಿಕಾರ ಸ್ವೀಕಾರ: ಕಾನೂನು ಹೋರಾಟದ ಮೂಲಕ ಒಂದೇ ದಿನದಲ್ಲಿ ವಾಪಸ್!

Share News

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕಿ (MD) ಎಂ.ಎಸ್. ಅರ್ಚನಾ (IAS) ಅವರು ವರ್ಗಾವಣೆಯಾದ ಕೇವಲ ಒಂದೇ ದಿನದಲ್ಲಿ ಮತ್ತೆ ತಮ್ಮ ಹಳೆಯ ಹುದ್ದೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಭ್ರಷ್ಟರಿಗೆ ಸೂಕ್ತ ತಿರುಗೇಟು ನೀಡಿದ್ದಾರೆ.

 

​ಇತ್ತೀಚೆಗಷ್ಟೇ ಸೆಸ್ಕಾಂನಲ್ಲಿ ಕಂಡುಬಂದಿದ್ದ ಹಲವು ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಎಂ.ಎಸ್. ಅರ್ಚನಾ ಅವರು, ಅಕ್ರಮದಲ್ಲಿ ಭಾಗಿಯಾಗಿದ್ದ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದರು. ಇದರಿಂದ ಕಂಗಾಲಾಗಿದ್ದ ಭ್ರಷ್ಟರ ಗುಂಪೊಂದು, ತಮ್ಮ ರಾಜಕೀಯ ಹಾಗೂ ಆಡಳಿತಾತ್ಮಕ ಪ್ರಭಾವ ಬಳಸಿ ಅರ್ಚನಾ ಅವರನ್ನು ದಿಢೀರನೆ ಹುದ್ದೆಯಿಂದ ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾಗಿತ್ತು. ಅರ್ಚನಾ ಅವರ ಜಾಗಕ್ಕೆ ಎನ್‌. ಚಂದ್ರಶೇಖರ್ ಅವರನ್ನು ಸೆಸ್ಕಾಂ ಎಂಡಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.

 

​ಆದರೆ, ಈ ಅನ್ಯಾಯದ ವಿರುದ್ಧ ಧೃತಿಗೆಡದ ಅಧಿಕಾರಿ ಅರ್ಚನಾ ಅವರು ತಕ್ಷಣವೇ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿ ಕೇವಿಯೆಟ್ ಸಲ್ಲಿಸಿದ್ದರು. ಕಾನೂನು ಸಂಘರ್ಷದಲ್ಲಿ ಜಯಗಳಿಸಿದ ಅವರು, ನಿನ್ನೆ ವರ್ಗಾವಣೆಯಾಗಿ, ಇಂದು ಮತ್ತೆ ಸೆಸ್ಕಾಂ ಎಂಡಿ ಅಧಿಕಾರವನ್ನು ಮರಳಿ ವಹಿಸಿಕೊಂಡಿದ್ದಾರೆ. ಪರಿಣಾಮವಾಗಿ, ಎನ್. ಚಂದ್ರಶೇಖರ್ ಅವರ ಅಧಿಕಾರಾವಧಿ ಕೇವಲ ಒಂದು ದಿನಕ್ಕೆ ಅಂತ್ಯಗೊಂಡಿದೆ.

 

​ನೇರ ಮತ್ತು ಕಟ್ಟುನಿಟ್ಟಿನ ಅಧಿಕಾರಿಯಾದ ಅರ್ಚನಾ ಅವರ ಈ ದಿಢೀರ್ ಪುನರಾಗಮನವು ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರೆ, ಪ್ರಾಮಾಣಿಕ ಸಿಬ್ಬಂದಿ ಹಾಗೂ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin