ಪಾವಗಡ: ಕಳೆದ ಹಲವು ತಿಂಗಳಿಂದ ಗಡಿ ಭಾಗದ ಗ್ರಾಮಸ್ಥರು ಹಾಗೂ ಪಾವಗಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ, ನಕ್ಸಲ್ ಹೆಸರಿನಲ್ಲಿ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ಕನಿಕಲಬಂಡೆಯ ಕುಖ್ಯಾತ ಉಪ್ಪಾರ ವೆಂಕಟೇಶ್ ಅಲಿಯಾಸ್ ‘ಜೂಡೋ ನಕ್ಸಲ್ ವೆಂಕಟೇಶ್’ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪಾವಗಡ ಪಟ್ಟಣ ಸಮೀಪದ ಕಡಮಲಕುಂಟೆ ಬೆಟ್ಟದ ಬಳಿ ಇಂದು ಸಂಜೆ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರ ಭರ್ಜರಿ ಕಾರ್ಯಾಚರಣೆ:
ಅಡಿಷನಲ್ ಎಸ್ಪಿ ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆಯಲ್ಲಿ ಪಾವಗಡ ಇನ್ಸ್ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್ಸ್ಪೆಕ್ಟರ್ ಕೊಟ್ರೇಶ್, ಸಬ್ ಇನ್ಸ್ಪೆಕ್ಟರ್ ಸುನಿಲ್ ಹಾಗೂ ಅವರ ಸಿಬ್ಬಂದಿ ತಂಡ ಭಾಗವಹಿಸಿ ಆರೋಪಿಯನ್ನು ವಶಕ್ಕೆ ಪಡೆದಿದೆ.
ಹಲವು ಅಕ್ರಮ ಕೃತ್ಯಗಳಲ್ಲಿ ಭಾಗಿ:
ಬಂಧಿತ ವೆಂಕಟೇಶ್ ಕಳೆದ ಕೆಲವು ತಿಂಗಳಿಂದ ಕನಿಕಲಬಂಡೆ ಗ್ರಾಮದಲ್ಲಿ ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗುವುದು ಹಾಗೂ ಜೀವ ಬೆದರಿಕೆ ಒಡ್ಡುವ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಹಿಂದೆ ಪೊಲೀಸರು ಆತನನ್ನು ಬಂಧಿಸಲು ಗ್ರಾಮಕ್ಕೆ ತೆರಳಿದ್ದಾಗ, ಬೆಟ್ಟದ ಮೇಲಿಂದ ನಾಡಬಾಂಬ್ ಸ್ಫೋಟಿಸಿ ಪರಾರಿಯಾಗಿದ್ದ.
ಆಗಸ್ಟ್ 29 ರಂದು ರೈತ ಕರಿಯಣ್ಣ ಎಂಬುವರ ಪಂಪ್ಸೆಟ್ಗೆ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಗಂಭೀರ ಆರೋಪವೂ ಈತನ ಮೇಲಿದೆ. ಅಲ್ಲದೆ, ಇತ್ತೀಚೆಗೆ ಗಂಗಸಾಗರದ ರೈತರೊಬ್ಬರಿಗೆ ‘ಪೀಪಲ್ಸ್ ವಾರ್ ದಳಂ’ ಹೆಸರಿನಲ್ಲಿ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟು ಬೆದರಿಕೆ ಪತ್ರ ಅಂಟಿಸಿದ ಪ್ರಕರಣದಲ್ಲೂ ಈತನ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ.
ಆರೋಪಿ ವೆಂಕಟೇಶನ ಬಂಧನದಿಂದಾಗಿ ಭೀತಿಗೆೊಳಗಾಗಿದ್ದ ಗಡಿ ಭಾಗದ ಗ್ರಾಮಸ್ಥರು ಹಾಗೂ ರೈತರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.