ಬೆಂಗಳೂರು: ರಾಮಾಯಣದ ಪಾತ್ರಗಳ ಬಗ್ಗೆ ವಿವಾದಾತ್ಮಕ ಮತ್ತು ಹಗುರವಾಗಿ ಮಾತನಾಡಿದ ಆರೋಪದ ಹಿನ್ನೆಲೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಬೆಂಗಳೂರಿನಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ಇತ್ತೀಚೆಗೆ ಕೇರಳದಲ್ಲಿ ನಡೆದ ಸಾಹಿತ್ಯ ಉತ್ಸವವೊಂದರಲ್ಲಿ ಭಾಗವಹಿಸಿದ್ದ ಪ್ರಕಾಶ್ ರಾಜ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ನಡುವಿನ ಸಂಘರ್ಷದ ಕುರಿತು ಮಾತನಾಡುತ್ತಿದ್ದರು. ಈ ವೇಳೆ ರಾಮಾಯಣದ ಪ್ರಸಂಗಗಳನ್ನು ಉಲ್ಲೇಖಿಸಿದ ಅವರು, “ರಾಮ ಉತ್ತರ ಭಾರತದವನು, ರಾವಣ ಬುಡಕಟ್ಟು ಜನಾಂಗಕ್ಕೆ ಸೇರಿದವನು. ದಕ್ಷಿಣ ಭಾರತಕ್ಕೆ ಬಂದಾಗ ಲಕ್ಷ್ಮಣನಿಗೆ ಹಣ್ಣಿನ ತೋಟ ಕಂಡು ಹಣ್ಣು ತಿನ್ನಬೇಕು ಎನಿಸಿತು. ರಾಮ-ಲಕ್ಷ್ಮಣರು ಹಣ್ಣು ಕಿತ್ತು ತಿಂದರು. ಇದನ್ನು ನೋಡಿದ ಶೂರ್ಪಣಖಿ ಹಣ್ಣು ತಿಂದಿದ್ದಕ್ಕೆ ಪ್ರತಿಯಾಗಿ ಏನಾದರೂ ನೀಡುವಂತೆ ಕೇಳಿದಳು. ಈ ಹಣ್ಣು ಕದ್ದ ವಿಚಾರದಿಂದಲೇ ಸಂಘರ್ಷ ಆರಂಭವಾಯಿತು” ಎಂದು ಹೇಳಿಕೆ ನೀಡಿದ್ದರು.
ಇತಿಹಾಸ ಮತ್ತು ಪುರಾಣ ಪ್ರಸಿದ್ಧ ರಾಮಾಯಣವನ್ನು ತಮಗೆ ಇಷ್ಟಬಂದಂತೆ ವ್ಯಾಖ್ಯಾನಿಸಿ, ದೇವತಾ ಮನುಷ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ದೂರಿನ ಮೇರೆಗೆ ಇದೀಗ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರಕಾಶ್ ರಾಜ್ ಅವರು ಈ ಹಿಂದೆಯೂ ಹಲವು ಬಾರಿ ತಮ್ಮ ರಾಜಕೀಯ ಮತ್ತು ಸಾಮಾಜಿಕ ಹೇಳಿಕೆಗಳಿಂದ ವಿವಾದಕ್ಕೀಡಾಗಿದ್ದರು. ಆದರೆ, ಈ ಬಾರಿ ರಾಮಾಯಣದ ಮೂಲ ಕಥೆಯನ್ನೇ ಬದಲಿಸಿ ಹೇಳಿಕೆ ನೀಡಿರುವುದು ಭಕ್ತರ ಮತ್ತು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.