ತೇರಕಣಾಂಬಿ: ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಮಿತಿಯ ಕೇಂದ್ರ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಾಬಾ ಸಾಹೇಬ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಮಹನೀಯರ ಆದರ್ಶಗಳನ್ನು ಸ್ಮರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲಕ್ಷ್ಮೀ ಮಹೇಶ್ ಅವರು ಮಾತನಾಡಿ, “ಪ್ರಸ್ತುತ ಸಂಕೀರ್ಣ ಕಾಲಘಟ್ಟದಲ್ಲಿ ಅಂಬೇಡ್ಕರ್ ಹಾಗೂ ಬಸವಣ್ಣನವರ ವಿಚಾರಧಾರೆಗಳು ನಮಗೆ ದಾರಿದೀಪವಾಗಬೇಕು. ಪೋಷಕರು ತಮ್ಮ ಮಕ್ಕಳನ್ನು ದೂರದ ಊರುಗಳ ಹಾಸ್ಟೆಲ್‌ಗಳಿಗೆ ಕಳುಹಿಸಿ ಓದಿಸುವ ಭರದಲ್ಲಿ, ಮಕ್ಕಳು ದುಶ್ಚಟಗಳಿಗೆ ದಾಸರಾಗದಂತೆ ಎಚ್ಚರ ವಹಿಸಬೇಕು. ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಭದ್ರಪಡಿಸಬೇಕು,” ಎಂದು ಕಳವಳ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕಾಳಿಂಗ ಸ್ವಾಮಿ ಸಿದ್ದಾರ್ಥ್ ಅವರು ಮಾತನಾಡಿ, “ಅಂಬೇಡ್ಕರ್ ಜಯಂತಿ ಕೇವಲ ಕೇರಿಗಳಿಗೆ ಅಥವಾ ಸರ್ಕಾರಿ ಕಚೇರಿಗಳಿಗೆ ಸೀಮಿತವಾಗದೆ, ಇಂದು ಖಾಸಗಿ ಸಂಘ-ಸಂಸ್ಥೆಗಳು ಹೆಚ್ಚಿನ ಆಸಕ್ತಿಯಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಅಂಬೇಡ್ಕರ್ ಅವರ ಜೀವನಶೈಲಿ ಮತ್ತು ಸಂವಿಧಾನಾತ್ಮಕ ಮೌಲ್ಯಗಳು ಇಂದಿನ ಯುವ ಪೀಳಿಗೆಗೆ ಅತಿ ಅವಶ್ಯಕವಾಗಿದೆ,” ಎಂದರು.
ಕಾರ್ಯಕ್ರಮ ಆಯೋಜಿಸಿದ್ದ ಸಮಿತಿಯ ಚಾಮರಾಜನಗರ ಜಿಲ್ಲಾಧ್ಯಕ್ಷರಾದ ಎಚ್.ಎಸ್. ಸುಪ್ರೀತ್ ಕುಮಾರ್ ಮಾತನಾಡಿ, “ಸಂವಿಧಾನದ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ನಮ್ಮ ಸಮಿತಿಯು ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗೌರವಾಧ್ಯಕ್ಷ ಗುರುಸ್ವಾಮಪ್ಪ, ರಾಜ್ಯ ಕಾರ್ಯದರ್ಶಿ ಡಿ. ಮಾದೇಶ್, ಜಿಲ್ಲಾ ಗೌರವಾಧ್ಯಕ್ಷ ನಟರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ. ವಿಶ್ವ, ತಾಳವಾಡಿ ತಾಲೂಕು ಅಧ್ಯಕ್ಷ ಪ್ರಕಾಶ್, ಮಹಿಳಾ ಅಧ್ಯಕ್ಷೆ ಇಂದಿರಾ ಶಾಂತಮಲ್ಲಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಂಕ್ರಪ್ಪ, ಮಲ್ಲಜಮ್ಮ ಹಾಗೂ ಸಾಕಮ್ಮ, ವಾಸು, ಶೇಖರ್, ಶಿವಕುಮಾರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.