Police Roundup

ಭಟ್ಕಳ ತಟ್ಟೆಹಕ್ಕಲ ಹೊಳೆ ದುರಂತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, ನಾಪತ್ತೆಯಾಗಿದ್ದ ಮಾದೇವ ನಾಯ್ಕ ಶವ ಪತ್ತೆ

Share News

ಭಟ್ಕಳ: ತಾಲೂಕಿನ ತಟ್ಟೆಹಕ್ಕಲ ಹೊಳೆಯಲ್ಲಿ ಚಿಪ್ಪಿಕಲ್ಲು (ಕಪ್ಪೆಚಿಪ್ಪು) ಆರಿಸಲು ಹೋಗಿ ಸಂಭವಿಸಿದ ಭೀಕರ ಜಲ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 11ಕ್ಕೆ ಏರಿಕೆಯಾಗಿದೆ. ಭಾನುವಾರ ನಡೆದ ಘಟನೆಯಲ್ಲಿ ನಾಪತ್ತೆಯಾಗಿದ್ದ ಮಾದೇವ ಜಟ್ಟಪ್ಪ ನಾಯ್ಕ ಅವರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.

 

​ಘಟನೆ ನಡೆದ ದಿನದಿಂದಲೇ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಸಿಬ್ಬಂದಿ, ಸೋಮವಾರ ಮುಂಜಾನೆಯಿಂದಲೇ ತೀವ್ರ ಶೋಧ ಕಾರ್ಯ ನಡೆಸಿ ಮಾದೇವ ನಾಯ್ಕ ಅವರ ಶವವನ್ನು ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ತೆಯಾದ ಮೃತದೇಹವನ್ನು ತಕ್ಷಣವೇ ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

 

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲ ಬಳಿ ಕಪ್ಪೆಚಿಪ್ಪು ಹೆಕ್ಕಲು ಒಂದೇ ಕುಟುಂಬದವರು ಹಾಗೂ ನೆರೆಹೊರೆಯವರೂ ಸೇರಿದಂತೆ ಒಟ್ಟು 13 ಜನರು ನದಿಗೆ ಇಳಿದಿದ್ದರು. ಆದರೆ, ನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಅಲೆಗಳ ಅಬ್ಬರ ಜೋರಾದ ಹಿನ್ನೆಲೆಯಲ್ಲಿ ಇವರೆಲ್ಲರೂ ನೀರಿನ ರಭಸಕ್ಕೆ ಸಿಲುಕಿದ್ದಾರೆ. ನೋಡನೋಡುತ್ತಿದ್ದಂತೆಯೇ 11 ಜನರು ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿದ್ದು, ಇಬ್ಬರು ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

ಭಟ್ಕಳ ತಾಲೂಕು ಆಸ್ಪತ್ರೆಯ ಶವಾಗಾರದ ಎದುರು ಮೃತದೇಹಗಳನ್ನು ಕಂಡು ಕುಟುಂಬಸ್ಥರು ಮತ್ತು ಆಪ್ತರು ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಕ್ಕೆ ಆಧಾರವಾಗಿದ್ದ ಮಹಿಳೆಯರು ಹಾಗೂ ಯುವಕರು ಒಂದೇ ಘಟನೆಯಲ್ಲಿ ಸಾವನ್ನಪ್ಪಿರುವುದು ಇಡೀ ಶಿರಾಲಿ ಮತ್ತು ಅಳ್ವೇಕೋಡಿ ಗ್ರಾಮಗಳನ್ನು ಮೌನ ಮತ್ತು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. ಈ ಭೀಕರ ದುರಂತ ಇಡೀ ಜಿಲ್ಲೆಯನ್ನೇ ಕಂಗೆಡಿಸಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin