ಬೆಳಗಾವಿ: ನಗರದಲ್ಲಿ ಸರಣಿ ಮನೆಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಎಪಿಎಂಸಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ದೇವೆಂದ್ರ ಉರ್ಫ ಡೇಬ್ಯಾ ರಮೇಶ ವಾಘಮೋರೆ (39), ಸಚೀನ ದತ್ತಾತ್ರೇಯ ಗೌಳಿ (39) ಮತ್ತು ಕಪೀಲ ಉರ್ಫ ಅಪ್ಪಾ ಭಜರಂಗ ಜಾಧವ (23) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಒಟ್ಟು 4.71 ಲಕ್ಷ ರೂಪಾಯಿ ಮೌಲ್ಯದ ಮಾಲನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರಲ್ಲಿ:
1.67 ಲಕ್ಷ ರೂ. ಮೌಲ್ಯದ 12.080 ಗ್ರಾಂ ಚಿನ್ನದ ಆಭರಣಗಳು.
1.83 ಲಕ್ಷ ರೂ. ಮೌಲ್ಯದ 744.5 ಗ್ರಾಂ ಬೆಳ್ಳಿಯ ಆಭರಣಗಳು.
ಕೃತ್ಯಕ್ಕೆ ಬಳಸಿದ್ದ 1.20 ಲಕ್ಷ ರೂ. ಮೌಲ್ಯದ ಎರಡು ಮೋಟಾರ್ ಸೈಕಲ್‌ಗಳು ಸೇರಿವೆ.
ಮೇ 3ರಂದು ನಗರದ ಕುವೆಂಪು ನಗರದ ನಿವಾಸಿ, ನಿವೃತ್ತ ಉಪನ್ಯಾಸಕ ಅರುಣ ವಾಮನರಾವ ಜಾಧವ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದ ಬಗ್ಗೆ ಅವರು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಎಪಿಎಂಸಿ ಠಾಣೆ ಇನ್ಸ್‌ಪೆಕ್ಟರ್ ಯು.ಎಸ್. ಅವಟಿ ಅವರ ನೇತೃತ್ವದಲ್ಲಿ, ಪಿಎಸ್ ಐ ಎಸ್.ಕೆ. ಹೊಳೆನ್ನವರ, ಎಎಸ್ ಐ ಎಂ.ಎ. ಪಾಟೀಲ ಹಾಗೂ ಸಿಬ್ಬಂದಿಗಳಾದ ಡಿ.ಸಿ. ಸಾಗರ, ಬಸವರಾಜ ನರಗುಂದ ಸೇರಿದಂತೆ ಬೆರಳು ಮುದ್ರೆ ಘಟಕದ ಅಧಿಕಾರಿ ಇನ್ಸ್‌ಪೆಕ್ಟರ್ ಆನಂದ ಮೇತ್ರಿ ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಪೊಲೀಸರ ಈ ಶೀಘ್ರ ಕಾರ್ಯಾಚರಣೆ ಮತ್ತು ಅಂತಾರಾಜ್ಯ ಕಳ್ಳರ ಬಂಧನವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.