ಬೇಲೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನ (Cross Voting) ಆರೋಪದ ಕಿಡಿ ಈಗ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ ತಲುಪಿದೆ. ತಮ್ಮ ಮೇಲಿನ ಕ್ರಾಸ್ ವೋಟಿಂಗ್ ಕಳಂಕವನ್ನು ತೊಳೆದುಕೊಳ್ಳಲು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಅವರು ಇಂದು (ಮಂಗಳವಾರ) ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಅಡ್ಡ ಮತದಾನದ ವಿವಾದವು, ಈಗ ಮಲೆನಾಡಿನ ಶಾಸಕರೊಬ್ಬರ ಆಣೆ-ಪ್ರಮಾಣದ ಸ್ವರೂಪ ಪಡೆದುಕೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊರಡುವ ಮುನ್ನ ಶಾಸಕ ಹೆಚ್.ಕೆ. ಸುರೇಶ್ ಅವರು ತಮ್ಮ ನೂರಾರು ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ದೇವಾಲಯದ ಆವರಣದಲ್ಲಿರುವ ಪವಿತ್ರ ಬಲಿ ಕಲ್ಲಿನ ಮೇಲೆ ಕೈಯಿಟ್ಟು, “ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಅಡ್ಡ ಮತದಾನ ಮಾಡಿಲ್ಲ. ನನ್ನ ಪ್ರಾಣ ಹೋದರೂ ಪಕ್ಷಕ್ಕೆ ದ್ರೋಹ ಬಗೆದಿಲ್ಲ” ಎಂದು ಚನ್ನಕೇಶವನ ಸಾಕ್ಷಿಯಾಗಿ ಮೊದಲ ಆಣೆ ಮಾಡಿದರು.
ತಮ್ಮ ಆಣೆಯ ದೃಢತೆಗೆ ಸಾಕ್ಷಿಯಾಗಿ ದೇವರ ಮುಂಭಾಗದಲ್ಲೇ ಕರ್ಪೂರ ಹಚ್ಚಿ ನಮಸ್ಕರಿಸಿದ ಶಾಸಕರು, ಅಲ್ಲಿಂದ ನೇರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಪಯಣ ಬೆಳೆಸಿದರು.
ತಮ್ಮ ವಿರುದ್ಧ ಕ್ರಾಸ್ ವೋಟಿಂಗ್ ಆರೋಪ ಕೇಳಿಬಂದ ತಕ್ಷಣವೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಶಾಸಕ ಸುರೇಶ್, “ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ನಾನು ಧರ್ಮಸ್ಥಳದ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡಲು ಸಿದ್ಧ” ಎಂದು ಸವಾಲು ಹಾಕಿದ್ದರು. ಅದರಂತೆಯೇ ಇಂದು ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥನ ಪಾದದ ಮುಂದೆ ನಿಂತು ಸತ್ಯಪ್ರಮಾಣ ಮಾಡಲಿದ್ದಾರೆ.
ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಸದ್ದಾಗುತ್ತಿದ್ದ ಕ್ರಾಸ್ ವೋಟಿಂಗ್ ವಿಷಯವೀಗ ಧಾರ್ಮಿಕ ಮತ್ತು ಪವಿತ್ರ ಕ್ಷೇತ್ರಗಳ ಆಣೆ-ಪ್ರಮಾಣದ ಹಂತಕ್ಕೆ ತಲುಪಿರುವುದು ಬೇಲೂರು ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ. ಶಾಸಕರ ನಡೆಗೆ ಅವರ ಬೆಂಬಲಿಗರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ವಿರೋಧಿಗಳ ಆರೋಪಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.