Police Roundup

ಬೆಂಗಳೂರು: ‘ಫಾರಿನ್ ಸ್ಟೈಲ್’ ಪ್ರಪೋಸ್ ನೆಪದಲ್ಲಿ ಪ್ರಿಯಕರನ ಸಜೀವ ದಹನ; ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಕಿರಾತಕಿ ಪ್ರೇಯಸಿ!

Share News

ಬೆಂಗಳೂರು: ಪ್ರೀತಿಯ ಹೆಸರಿನಲ್ಲಿ ನಡೆದ ಅಮಾನವೀಯ ಕೃತ್ಯವೊಂದು ರಾಜಧಾನಿಯ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. “ವೆಸ್ಟರ್ನ್ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡುತ್ತೇನೆ” ಎಂದು ನಂಬಿಸಿ ಪ್ರಿಯಕರನ ಕೈಕಾಲು ಕಟ್ಟಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘೋರ ಘಟನೆ ಅಂಜನಾನಗರದಲ್ಲಿ ನಡೆದಿದೆ.

ರಾಜಾಜಿನಗರದ ವಿಐ (VI) ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ (27) ಕೊಲೆಯಾದ ದುರ್ದೈವಿ. ಅದೇ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮಾ ಎಂಬಾಕೆಯೊಂದಿಗೆ ಕಿರಣ್ ಕಳೆದ ಕೆಲವು ತಿಂಗಳಿಂದ ಪ್ರೇಮ ಸಂಬಂಧ ಹೊಂದಿದ್ದನು. ಇತ್ತೀಚಿನ ದಿನಗಳಲ್ಲಿ ಕಿರಣ್ ತನ್ನನ್ನು ಕಡೆಗಣಿಸುತ್ತಿದ್ದಾನೆ, ಸರಿಯಾಗಿ ಸಮಯ ನೀಡುತ್ತಿಲ್ಲ ಎಂಬ ಕಾರಣಕ್ಕೆ ಸಿಟ್ಟಾಗಿದ್ದ ಪ್ರೇಮಾ, ಆತನನ್ನು ಮುಗಿಸಲು ಸಂಚು ರೂಪಿಸಿದ್ದಳು ಎನ್ನಲಾಗಿದೆ.

 

ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಿರಣ್‌ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಪ್ರೇಮಾ, “ವಿದೇಶಿ ಶೈಲಿಯಲ್ಲಿ ನಿನಗೆ ಪ್ರಪೋಸ್ ಮಾಡುತ್ತೇನೆ” ಎಂದು ನಂಬಿಸಿದ್ದಾಳೆ. ಆಕೆಯ ಮಾತನ್ನು ನಂಬಿದ ಕಿರಣ್‌ನ ಬಟ್ಟೆ ಬಿಚ್ಚಿಸಿ, ಕೈಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿ, ಕಣ್ಣಿಗೂ ಬಟ್ಟೆ ಕಟ್ಟಿದ್ದಾಳೆ. ಕಿರಣ್ ಪ್ರತಿರೋಧ ತೋರಿದಾಗ “ಇದು ಫಾರಿನ್ ಸ್ಟೈಲ್, ನಿನಗೆ ಗೊತ್ತಾಗಲ್ಲ ಸುಮ್ಮನಿರು” ಎಂದು ಮರುಳು ಮಾಡಿದ್ದಾಳೆ.

 

ಕಿರಣ್ ಅಸಹಾಯಕ ಸ್ಥಿತಿಯಲ್ಲಿದ್ದಾಗ, ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಸೀಮೆ ಎಣ್ಣೆಯನ್ನು ಆತನ ಮೇಲೆ ಸುರಿದು ಪ್ರೇಮಾ ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಜ್ವಾಲೆಯಲ್ಲಿ ಕಿರಣ್ ಕಿರುಚಾಡುತ್ತಿದ್ದರೂ ಆಕೆಗೆ ಕಿಂಚಿತ್ತೂ ದಯೆ ಬರಲಿಲ್ಲ. ಕಿರಣ್‌ನ ಚೀರಾಟ ಕೇಳಿ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಕಿರಣ್ ಸ್ಥಳದಲ್ಲೇ ಸಜೀವ ದಹನವಾಗಿದ್ದನು.

 

ಘಟನಾ ಸ್ಥಳಕ್ಕೆ ಪೊಲೀಸರು ಬಂದಾಗ ಕಿರಣ್ ಬೆಂಕಿಯಲ್ಲಿ ಉರಿದು ಪ್ರಾಣ ಬಿಟ್ಟಿದ್ದರೂ, ಪಕ್ಕದಲ್ಲೇ ಇದ್ದ ಪ್ರೇಮಾಗೆ ಯಾವುದೇ ಗಾಯಗಳಾಗಿರಲಿಲ್ಲ ಅಥವಾ ಆಕೆಯ ಬಟ್ಟೆಗೆ ಬೆಂಕಿ ತಗುಲಿರಲಿಲ್ಲ. ಈ ಅಂಶ ಪೊಲೀಸರಲ್ಲಿ ಅನುಮಾನ ಮೂಡಿಸಿತು. ಆಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ತನ್ನನ್ನು ಅವಾಯ್ಡ್ ಮಾಡುತ್ತಿದ್ದ ಕಾರಣಕ್ಕೆ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.

​ಸದ್ಯ ಬ್ಯಾಡರಹಳ್ಳಿ ಪೊಲೀಸರು ಆರೋಪಿ ಪ್ರೇಮಾಳನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin