Police Roundup

ಬೆಂಗಳೂರು: 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇಇ ಮನೋಜ್ ಕುಮಾರ್!

Share News

ರಾಜಧಾನಿಯ ಜೆ.ಪಿ. ನಗರದ ಬೆಸ್ಕಾಂ (BESCOM) ಕಚೇರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಮನೋಜ್ ಕುಮಾರ್ ಹಾಗೂ ವಿದ್ಯುತ್ ಗುತ್ತಿಗೆದಾರ ಕಂಠರಾಜು ಅವರು 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಜಾಣ್ಮೆಯ ಟ್ರ್ಯಾಪ್‌ಗೆ ಸಿಕ್ಕಿಬಿದ್ದಿದ್ದಾರೆ.

 

ದೂರುದಾರರಾದ ರಘುರಾಜ್ ಎಂಬುವವರು ತಾತ್ಕಾಲಿಕವಾಗಿ ಮೀಟರ್‌ಗೆ 25 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆ (Power Supply) ಮಂಜೂರು ಮಾಡುವಂತೆ ಜೆ.ಪಿ. ನಗರದ ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಬೆಸ್ಕಾಂ ಎಇಇ ಮನೋಜ್ ಕುಮಾರ್ ಅವರು ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚ ನೀಡಲು ಇಷ್ಟವಿಲ್ಲದ ರಘುರಾಜ್ ಅವರು ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

 

ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಿಖರವಾದ ಕಾರ್ಯಾಚರಣೆ ರೂಪಿಸಿದ್ದರು. ಎಇಇ ಮನೋಜ್ ಕುಮಾರ್ ಸೂಚನೆಯ ಮೇರೆಗೆ ದೂರುದಾರ ರಘುರಾಜ್ ಅವರು ಲಂಚದ ಹಣ 50 ಸಾವಿರ ರೂಪಾಯಿಗಳನ್ನು ವಿದ್ಯುತ್ ಗುತ್ತಿಗೆದಾರ ಕಂಠರಾಜುಗೆ ನೀಡುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಹಣದ ಸಮೇತ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

 

ಲೋಕಾಯುಕ್ತ ಬೆಂಗಳೂರು ನಗರ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರ ಖುದ್ದಿನ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ಯಶಸ್ವಿ ದಾಳಿಯನ್ನು ನಡೆಸಿದೆ. ಸದ್ಯ ಲಂಚಬಾಕ ಅಧಿಕಾರಿ ಮನೋಜ್ ಕುಮಾರ್ ಹಾಗೂ ಆತನಿಗೆ ಸಾಥ್ ನೀಡಿದ ಗುತ್ತಿಗೆದಾರ ಕಂಠರಾಜು ಇಬ್ಬರನ್ನೂ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin