Skip to main content

Police Roundup

ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿ ಹತ್ಯೆ: ಪೊಲೀಸರ ಕಣ್ಣಿಗೆ ಮಣ್ಣೆರಚಲು ಕಾರಿಗೆ ‘Press’ ಸ್ಟಿಕ್ಕರ್ ಬಳಸಿದ್ದ ಆರೋಪಿ!

Share News

ಬೆಂಗಳೂರು: ರಾಜಧಾನಿಯಲ್ಲಿ ತಲ್ಲಣ ಸೃಷ್ಟಿಸಿದ್ದ ಒಂದೇ ಕುಟುಂಬದ ಏಳು ಮಂದಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. 15 ದಿನಗಳ ಅವಧಿಯಲ್ಲಿ ಏಳು ಜನರನ್ನು ಹತ್ಯೆಗೈದ ಆರೋಪ ಹೊತ್ತಿರುವ ರಾಜಾಜಿನಗರದ ಎಸ್. ಇಂದುಶೇಖರ್, ಮೃತದೇಹಗಳ ಸಾಗಾಟಕ್ಕೆ ಪೊಲೀಸರ ಕಣ್ಣಿಗೆ ಮಣ್ಣೆರಚಲು ಕಾರಿನ ಮೇಲೆ ‘Press’ (ಮಾಧ್ಯಮ) ಸ್ಟಿಕ್ಕರ್ ಬಳಸುತ್ತಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಮೃತದೇಹ ಸಾಗಣೆಗೆ ಮಾಧ್ಯಮ ಮುಖವಾಡ:

ಆರೋಪಿ ಇಂದುಶೇಖರ್ ಕೃತ್ಯ ಎಸಗಿದ ಬಳಿಕ ಮೃತದೇಹಗಳನ್ನು ಸುಲಭವಾಗಿ ಸಾಗಿಸಲು ಹಾಗೂ ತಪಾಸಣೆಯಿಂದ ತಪ್ಪಿಸಿಕೊಳ್ಳಲು ತನ್ನ ಟೊಯೊಟಾ ಎಟಿಯೋಸ್ (KA 02 AF 1488) ಕಾರಿನ ಮೇಲೆ ದೊಡ್ಡದಾಗಿ ‘ಪ್ರೆಸ್’ ಸ್ಟಿಕ್ಕರ್ ಅಂಟಿಸಿದ್ದ. ಅಷ್ಟೇ ಅಲ್ಲದೆ, ಕಾರಿನ ಹಿಂಭಾಗದ ಡಿಕ್ಕಿಯ ಮೇಲ್ಭಾಗದಲ್ಲಿ ‘ತಾನಾ ವರದಿ’ ಎಂಬ ಪತ್ರಿಕೆಯ ಹೆಸರಿನ ದೊಡ್ಡ ಬ್ಯಾನರ್ ಪ್ರದರ್ಶಿಸುತ್ತಿದ್ದ. ಈ ಬ್ಯಾನರ್ ಮತ್ತು ಮಾಧ್ಯಮದ ಹೆಸರನ್ನು ಬಳಸಿಕೊಂಡು ವಿಶೇಷವಾಗಿ ಹೊಸೂರು ಗಡಿ ಭಾಗಗಳಲ್ಲಿ ಪೊಲೀಸರ ಯಾವುದೇ ಅನುಮಾನಕ್ಕೆ ಆಸ್ಪದ ನೀಡದೆ ಮೃತದೇಹಗಳನ್ನು ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

ದುರ್ವಾಸನೆ ಬಾರದಂತೆ ಸುಗಂಧ ದ್ರವ್ಯ ಬಳಕೆ:

ಪೊಲೀಸರು ವಶಪಡಿಸಿಕೊಂಡಿರುವ ಕಾರಿನಲ್ಲಿ 14,900 ರೂಪಾಯಿಗಳ ಸಂಚಾರ ನಿಯಮ ಉಲ್ಲಂಘನೆ ದಂಡ ಬಾಕಿ ಇರುವುದು ಕಂಡುಬಂದಿದೆ. ಇದರ ಜೊತೆಗೆ ಕಾರಿನೊಳಗೆ ಚಂದನದ ಪರಿಮಳದ ಸುಗಂಧ ದ್ರವ್ಯಗಳ ಬಾಟಲಿಗಳು ಹಾಗೂ ಗುಲಾಬಿ ನೀರಿನ (Rose Water) ಬಾಟಲಿಗಳು ಪತ್ತೆಯಾಗಿವೆ. ಮೃತದೇಹಗಳನ್ನು ಸುಲಭವಾಗಿ ಸಾಗಿಸುವಾಗ ದುರ್ವಾಸನೆ ಹರಡದಂತೆ ಮುಚ್ಚಿಹಾಕಲು ಆರೋಪಿ ಈ ಸುಗಂಧ ದ್ರವ್ಯಗಳನ್ನು ಬಳಸುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

 

ಮಗಳನ್ನೇ ಬ್ಲ್ಯಾಕ್‌ಮೇಲ್ ಅಸ್ತ್ರ ಮಾಡಿಕೊಂಡಿದ್ದ ದುರಾತ್ಮ:

ಪ್ರಾಥಮಿಕ ತನಿಖೆಯ ವೇಳೆ ಆರೋಪಿಯ ಮತ್ತೊಂದು ಕಪ್ಪು ಮುಖ ಬಯಲಾಗಿದ್ದು, ಇಂದುಶೇಖರ್ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನೇ ಜನರನ್ನು ಬೆದರಿಸಲು ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದ ಎಂಬುದು ತಿಳಿದುಬಂದಿದೆ. ಸಾರ್ವಜನಿಕರಿಗೆ ಪೋಕ್ಸೊ (POCSO) ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪವೂ ಆತನ ಮೇಲಿದೆ.

 

ಸದ್ಯ ಕಾರನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದ ತೀವ್ರ ತನಿಖೆ ಮುಂದುವರಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin