Skip to main content

Police Roundup

ಬಾಯ್‌ಫ್ರೆಂಡ್ ಜೊತೆ ಸೇರಿ ಪತಿಯ ಕೊಲೆ: ಹೃದಯಾಘಾತವೆಂದು ಬಿಂಬಿಸಿದ್ದ ಖತರ್ನಾಕ್ ಪತ್ನಿ, ಪ್ರಿಯಕರನ ಬಂಧನ!

Share News

ಬೆಂಗಳೂರು: ಪ್ರಿಯಕರನ ಜೊತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಿ, ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದ ಖತರ್ನಾಕ್ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

​ಬಂಧಿತರನ್ನು ಮೃತನ ಪತ್ನಿ ಅನಿತಾ (36) ಹಾಗೂ ಆಕೆಯ ಪ್ರಿಯಕರ ಮಧುಸೂದನ್ ಎಂದು ಗುರುತಿಸಲಾಗಿದೆ. ಇಬ್ಬರೂ ಆಂಧ್ರಪ್ರದೇಶದ ಒಂದೇ ಗ್ರಾಮದವರಾಗಿದ್ದು, ಪರಸ್ಪರ ಪರಿಚಯ ಹೊಂದಿದ್ದರು.

 

​ಘಟನೆಯ ಹಿನ್ನೆಲೆ:

​ಅಕ್ಟೋಬರ್ 12ರಂದು ಬೆಳಗಿನ ಜಾವ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡತೋಗೂರಿನ ಮನೆಯಲ್ಲಿ 41 ವರ್ಷದ ಉಪೇಂದ್ರ ಎಂಬುವವರ ಹತ್ಯೆಯಾಗಿತ್ತು. ಕೊಲೆ ಮಾಡಿದ ಬಳಿಕ ಪತ್ನಿ ಅನಿತಾ, ಪತಿ ಸ್ನಾನಗೃಹದಲ್ಲಿ ಜಾರಿ ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಂಬಿಸಿ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ಆರಂಭದಲ್ಲಿ ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡಿದ್ದರು.

 

​ಕೇಸ್‌ಗೆ ಟ್ವಿಸ್ಟ್ ನೀಡಿದ ಮರಣೋತ್ತರ ಪರೀಕ್ಷೆ ವರದಿ:

​ಇತ್ತೀಚೆಗೆ ಬಂದ ಉಪೇಂದ್ರ ಅವರ ಮರಣೋತ್ತರ ಪರೀಕ್ಷೆಯ (Post-Mortem) ವರದಿಯಲ್ಲಿ ಅವರು ‘ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ’ ಎಂದು ಉಲ್ಲೇಖವಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು. ಘಟನೆ ನಡೆದ ದಿನ ಉಪೇಂದ್ರ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಹೋಗಿದ್ದ ಸುಳಿವು ಸಿಸಿಟಿವಿ ಹಾಗೂ ಸ್ಥಳೀಯರ ವಿಚಾರಣೆಯಿಂದ ಲಭ್ಯವಾಗಿತ್ತು. ಅದರ ಆಧಾರದ ಮೇಲೆ ಮಧುಸೂದನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಅಸಲಿ ರಹಸ್ಯ ಬಯಲಾಗಿದೆ.

 

​ಅಕ್ರಮ ಸಂಬಂಧವೇ ಕೊಲೆಗೆ ಕಾರಣ:

​ಉಪೇಂದ್ರ ಮತ್ತು ಅನಿತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಅನಿತಾ ತನ್ನ ಗ್ರಾಮದ ಮಧುಸೂದನ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ಉಪೇಂದ್ರ ಅವರಿಗೆ ತಿಳಿದು, ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ತಮ್ಮ ಸಂಬಂಧಕ್ಕೆ ಉಪೇಂದ್ರ ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ, ಅವರನ್ನು ಕತ್ತು ಹಿಸುಕಿ ಹಾಗೂ ಮೂಗು-ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಲು ಇಬ್ಬರೂ ಸಂಚು ರೂಪಿಸಿದ್ದರು ಎಂಬುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.

 

​ಪೋಲಿಸ್ ಕಸ್ಟಡಿಗೆ ಆರೋಪಿಗಳು:

​ನವೆಂಬರ್ 6 ರಂದು ದೊಡ್ಡತೋಗೂರಿನ ಮನೆಯಲ್ಲಿದ್ದ ಅನಿತಾಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆಕೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin