ಬೆಂಗಳೂರು: ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿದ ಗೌತಮ ಬುದ್ಧ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ವಕೀಲರಾದ ಪ್ರೇಮಿಳಾ ನೇಸರ್ಗಿ ಅವರು ಕರೆ ನೀಡಿದ್ದಾರೆ.
ನಗರದ ನಯನ ಸಭಾಂಗಣದಲ್ಲಿ ‘ಇದು ನಿಮ್ಮ ವಾಹಿನಿ ಕಲಾ ವೇದಿಕೆ’ ವತಿಯಿಂದ ಆಯೋಜಿಸಲಾಗಿದ್ದ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತೋತ್ಸವ ಮತ್ತು 22ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬುದ್ಧನು ಶಾಂತಿಯ ಮಾರ್ಗದ ಮೂಲಕವೇ ಜಗತ್ತಿನಾದ್ಯಂತ ಜನರ ಮನಸ್ಸನ್ನು ಗೆದ್ದು ಜ್ಞಾನದ ಬೆಳಕನ್ನು ಹರಿಸಿದ ಮಹಾಜ್ಞಾನಿ. ಅದೇ ಹಾದಿಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಶೋಷಿತರ, ದೀನದಲಿತರ ಪರವಾಗಿ ಸದಾ ಧ್ವನಿ ಎತ್ತಿ, ಶ್ರೇಷ್ಠ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಮಹಾನ್ ಚೇತನವಾಗಿ ಹೊರಹೊಮ್ಮಿದರು. ಈ ಇಬ್ಬರು ಮಹನೀಯರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿವೆ ಎಂದು ಪ್ರೇಮಿಳಾ ನೇಸರ್ಗಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಉಪ ಪೊಲೀಸ್ ಆಯುಕ್ತರಾದ (ಡಿಸಿಪಿ) ಡಾ. ಹೆಚ್. ಮಂಜುನಾಥ್ ಬಾಬು ಅವರು, “ಇಂದು ನಾವೆಲ್ಲರೂ ಗೌರವಯುತವಾಗಿ ಕಾನೂನಿನ ಅಡಿಯಲ್ಲಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಮುಖ್ಯ ಕಾರಣ. ಬುದ್ಧನ ಶಾಂತಿ ಮಾರ್ಗ ಮತ್ತು ಅಂಬೇಡ್ಕರ್ ಅವರ ಸತತ ಹೋರಾಟದ ಬದುಕು ನಮ್ಮೆಲ್ಲರಿಗೂ ಸದಾ ಮಾದರಿಯಾಗಬೇಕು” ಎಂದರು. ಇದೇ ವೇಳೆ ಸಮಾಜದಲ್ಲಿ ಹೆಚ್ಚಾಗುತ್ತಿರುವ ಮಾದಕ ದ್ರವ್ಯಗಳ (ಡ್ರಗ್ಸ್) ಹಾವಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇದನ್ನು ತಡೆಗಟ್ಟುವಲ್ಲಿ ಪೋಷಕರು ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ಮಕ್ಕಳ ಮೇಲೆ ನಿಗಾ ಇಡಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು:
ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ: ಹಿರಿಯ ವಕೀಲರಾದ ಪ್ರೇಮಿಳಾ ನೇಸರ್ಗಿ ಹಾಗೂ ಡಿಸಿಪಿ ಡಾ. ಹೆಚ್. ಮಂಜುನಾಥ್ ಬಾಬು ಅವರಿಗೆ ನೀಡಿ ಸತ್ಕರಿಸಲಾಯಿತು.
ಮಾಧ್ಯಮ ಸೇವಾ ರತ್ನ ಪ್ರಶಸ್ತಿ: ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಾದ ಗಂಡಸಿ ಸದಾನಂದಸ್ವಾಮಿ, ಸುಬ್ರಹ್ಮಣ್ಯ ಹಂಡಿಗೆ ಹಾಗೂ ಶಿವರಾಜ್ ಮೌರ್ಯ ಅವರಿಗೆ ಪ್ರದಾನ ಮಾಡಲಾಯಿತು.
ವಿಶಿಷ್ಟ ಸೇವಾ ರತ್ನ ಪ್ರಶಸ್ತಿ: ಸಂಜೀವಿನಿ ರೇಖಿ ಹೀಲಿಂಗ್ ಸೆಂಟರ್‌ನ ಡಾ. ವಿ. ಭರಣಿ ರಾಜು ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪುಟಾಣಿ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ವೇದಿಕೆಯಲ್ಲಿ ‘ಇದು ನಿಮ್ಮ ವಾಹಿನಿ’ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಕಿಶೋರ್ ಕುಮಾರ್ ಕೆ.ಎಸ್. ಹಾಗೂ ಇವೆಂಟ್ ಕೋ-ಆರ್ಡಿನೇಟರ್ ಚಂದ್ರಿಕಾ ಬಿ.ವಿ. ಉಪಸ್ಥಿತರಿದ್ದರು.