ಆನೇಕಲ್: ತಾಲೂಕಿನ ಬೆಟ್ಟದಾಸನಪುರ ಗ್ರಾಮವು ಮತ್ತೊಮ್ಮೆ ಸಾಂಪ್ರದಾಯಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಗ್ಗೂಡಿ ಆಚರಿಸುವ ಮೂಲಕ ಭಾವೈಕ್ಯತೆಯ ಹಬ್ಬವಾಗಿ ವೈಭವದಿಂದ ಜರುಗಿತು.
ಈ ಜಾತ್ರೆಯ ವಿಶೇಷವೆಂದರೆ, ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ಮುಸ್ಲಿಂ ಸಮುದಾಯದ ಬಾಂಧವರು ಭಕ್ತಿಯಿಂದ ಆಯೋಜಿಸುವುದು. ಗ್ರಾಮದ ಎಲ್ಲಾ ಮುಸ್ಲಿಮರು ಒಗ್ಗೂಡಿ ಪಲ್ಲಕ್ಕಿ ಉತ್ಸವವನ್ನು ನಡೆಸಿ, ದೇವರಿಗೆ ಗೌರವ ಸಲ್ಲಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದರು.
ಈ ಕುರಿತು ಮಾತನಾಡಿದ ಗ್ರಾಮದ ಮುಖಂಡರಾದ ಬೆಟ್ಟದಾಸನಪುರ ನಾರಾಯಣಸ್ವಾಮಿ ಅವರು, “ನಮ್ಮ ಗ್ರಾಮವು ಮೊದಲಿನಿಂದಲೂ ಸಾಮರಸ್ಯ ಮತ್ತು ಭಾವೈಕ್ಯತೆಗೆ ಹೆಸರಾಗಿದೆ. ‘ದೇವನೊಬ್ಬ ನಾಮ ಹಲವು’ ಎಂಬ ತತ್ವದಂತೆ ನಾವು ಜಾತಿ-ಧರ್ಮದ ತಾರತಮ್ಯವಿಲ್ಲದೆ ಎಲ್ಲರೂ ಒಗ್ಗೂಡಿ ಹಬ್ಬಗಳನ್ನು ಆಚರಿಸುತ್ತೇವೆ. ಮುಸ್ಲಿಂ ಬಾಂಧವರು ಪಲ್ಲಕ್ಕಿ ಉತ್ಸವ ಆಯೋಜಿಸುವುದು ನಮ್ಮ ಗ್ರಾಮದ ಪರಂಪರೆಯಾಗಿದೆ,” ಎಂದು ತಿಳಿಸಿದರು.
ಮುಸ್ಲಿಂ ಸಮುದಾಯದ ಮುಖಂಡ ಬಾಬು ಅವರು ಮಾತನಾಡಿ, “ನಮ್ಮ ಹಿರಿಯರು ಬಿತ್ತಿ ಹೋದ ಭಾವೈಕ್ಯತೆಯ ಚಿಂತನೆಯನ್ನು ನಾವು ಇಂದಿಗೂ ಕಾಪಾಡಿಕೊಂಡು ಹೋಗುತ್ತಿದ್ದೇವೆ. ಪ್ರತಿ ವರ್ಷವೂ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಪಲ್ಲಕ್ಕಿಯನ್ನು ನಾವು ಕಟ್ಟುವುದು ನಮಗೆ ಹೆಮ್ಮೆಯ ವಿಷಯ. ಇಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎನ್ನುವ ಬೇಧವಿಲ್ಲದೆ ಪರಸ್ಪರ ಗೌರವದಿಂದ ಎಲ್ಲಾ ಹಬ್ಬಗಳಲ್ಲಿ ಭಾಗವಹಿಸುತ್ತೇವೆ,” ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚಾಮರಾಜು, ಮುಸ್ಲಿಂ ಸಮುದಾಯದ ಮುಖಂಡರಾದ ಶರೀಫ್, ಕಾಂತರಾಜು ಸೇರಿದಂತೆ ಗ್ರಾಮದ ನೂರಾರು ಭಕ್ತಾದಿಗಳು ಪಾಲ್ಗೊಂಡು ಸೌಹಾರ್ದತೆಯ ಜಾತ್ರೆಗೆ ಸಾಕ್ಷಿಯಾದರು.