ಚಿತ್ರದುರ್ಗ: ಮದುವೆಯಾದ ಸಂಭ್ರಮದ ದಿನವೇ ನವವಿವಾಹಿತೆಯೊಬ್ಬಳು ದಾರುಣವಾಗಿ ಕೊಲೆಯಾದ ಭೀಕರ ಘಟನೆಗೆ ಸಂಬಂಧಿಸಿದಂತೆ ಇದೀಗ ಸ್ಫೋಟಕ ತಿರುವು ಸಿಕ್ಕಿದ್ದು, ಗಂಡನ ಸ್ನೇಹಿತರೇ ಈ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಎನ್. ಮಹದೇವಪುರ ಬಳಿ ಈ ಘಟನೆ ನಡೆದಿದ್ದು, 20 ವರ್ಷದ ಸುಮಲತ ಕೊಲೆಯಾದ ದುರದೃಷ್ಟಕರ ನವವಿವಾಹಿತೆ. ಮದುವೆಯಾದ ದಿನವೇ ಈಕೆಯ ಮೇಲೆ ಗಂಡನ ಸ್ನೇಹಿತರು ಅತ್ಯಾಚಾರ ಎಸಗಿ, ಬಳಿಕ ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೃತ್ಯ ಎಸಗಿದ ನಂತರ ಸಾಕ್ಷ್ಯ ನಾಶಪಡಿಸಿ ಪ್ರಕರಣವನ್ನು ಮುಚ್ಚಿಹಾಕಲು ಶವವನ್ನು ಸಮೀಪದ ಬಾವಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಭಿನ್ನ ಹಾದಿಯಲ್ಲಿ ತನಿಖೆ ಕೈಗೆತ್ತಿಕೊಂಡ ನಾಯಕನಹಟ್ಟಿ ಪೊಲೀಸರು, ತೀವ್ರ ವಿಚಾರಣೆ ನಡೆಸಿ ಬೋರಯ್ಯ ಹಾಗೂ ಕಾರಯ್ಯ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಪಿಐ ಹನುಮಂತಪ್ಪ ಶಿರೇಹಳ್ಳಿ ಅವರ ನೇತೃತ್ವದಲ್ಲಿ ನಡೆದ ಚುರುಕಿನ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಈ ಸಂಬಂಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಮದುವೆಯ ಶುಭ ವೇಳೆಯಲ್ಲೇ ಯುವತಿಯ ಬದುಕು ಹೀಗೆ ದುರಂತಮಯವಾಗಿ ಕೊನೆಗೊಂಡಿರುವುದು ಸ್ಥಳೀಯರಲ್ಲಿ ತೀವ್ರ ದಿಗ್ಭ್ರಮೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.