Police Roundup

ಮದುವೆ ಮನೆಗಳಲ್ಲಿ ಮಕ್ಕಳೇ ಈತನ ಟಾರ್ಗೆಟ್: ಖತರ್ನಾಕ್ ಕಳ್ಳ ‘ಪಲ್ಸರ್ ಬಾಬು’ ಸಂಪಿಗೆಹಳ್ಳಿ ಪೊಲೀಸರ ವಶಕ್ಕೆ

Share News

ಮದುವೆ ಸಮಾರಂಭಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು, ಮಕ್ಕಳ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಎಗರಿಸುತ್ತಿದ್ದ ಕುಖ್ಯಾತ ಕಳ್ಳನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ ಎಂಟು ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

 

ಬಂಧಿತ ಆರೋಪಿಯನ್ನು ಬಾಬು ಅಲಿಯಾಸ್ ಪಲ್ಸರ್ ಬಾಬು ಎಂದು ಗುರುತಿಸಲಾಗಿದೆ. ಈತ ಮದುವೆ ಚೌಲ್ಟ್ರಿಗಳನ್ನೇ ತನ್ನ ಅಡ್ಡೆಯನ್ನಾಗಿಸಿಕೊಂಡಿದ್ದ. ಮದುವೆಗೆ ಬರುವ ಅತಿಥಿಗಳಂತೆ ಅತ್ಯಂತ ವೃತ್ತಿಪರವಾಗಿ ‘ಟಿಪ್ ಟಾಪ್’ ಬಟ್ಟೆ ಧರಿಸಿ ಕಲ್ಯಾಣ ಮಂಟಪದೊಳಗೆ ನುಗ್ಗುತ್ತಿದ್ದ. ಯಾರೂ ಸಂಶಯ ಪಡದ ರೀತಿಯಲ್ಲಿ ಪರಿಚಯಸ್ಥನಂತೆ ಬಣ್ಣದ ಮಾತುಗಳನ್ನಾಡುತ್ತಾ ಜನರ ಮಧ್ಯೆ ಬೆರೆಯುತ್ತಿದ್ದನು.

 

ಮಕ್ಕಳೇ ಟಾರ್ಗೆಟ್: ಸಮಾರಂಭದಲ್ಲಿ ಪೋಷಕರು ಕಾರ್ಯಕ್ರಮಗಳಲ್ಲಿ ನಿರತರಾಗಿರುವಾಗ, ಚಿನ್ನಾಭರಣ ಧರಿಸಿದ ಮಕ್ಕಳನ್ನು ಈತ ಗುರಿಯಾಗಿಸುತ್ತಿದ್ದ.

​ಯಾಮಾರಿಸಿ ಎಸ್ಕೇಪ್: ಮಕ್ಕಳೊಂದಿಗೆ ಆಟವಾಡುವಂತೆ ಅಥವಾ ಪರಿಚಯಸ್ಥರಂತೆ ನಟಿಸಿ, ಕ್ಷಣಾರ್ಧದಲ್ಲಿ ಅವರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದನು.

 

ಆರೋಪಿಯ ಬಂಧನದ ನಂತರ ನಡೆಸಿದ ವಿಚಾರಣೆಯಲ್ಲಿ ನಗರದ ವಿವಿಧೆಡೆ ನಡೆದಿದ್ದ ಎಂಟು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಸತತ ದೂರುಗಳ ಬೆನ್ನತ್ತಿದ ಸಂಪಿಗೆಹಳ್ಳಿ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಕೊನೆಗೂ ಈ ಖತರ್ನಾಕ್ ಆಸಾಮಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

​ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಮದುವೆ ಅಂತಹ ಜನನಿಬಿಡ ಸಮಾರಂಭಗಳಲ್ಲಿ ತಮ್ಮ ಮಕ್ಕಳ ಬಗ್ಗೆ ಮತ್ತು ಅವರ ಒಡವೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin