ದಾವಣಗೆರೆ: ರೈತರಿಂದ ಬರೋಬ್ಬರಿ 1.30 ಕೋಟಿ ರೂಪಾಯಿ ಮೌಲ್ಯದ ಭತ್ತವನ್ನು ಖರೀದಿಸಿ, ಹಣ ಪಾವತಿಸದೆ ದಲ್ಲಾಳಿಯೊಬ್ಬ ಪರಾರಿಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಹಾವೇರಿ ಜಿಲ್ಲೆಯ 40ಕ್ಕೂ ಹೆಚ್ಚು ರೈತರು ಈ ವಂಚನೆಯಿಂದ ಕಂಗಾಲಾಗಿದ್ದು, ದಾವಣಗೆರೆಯ ರೈಸ್ ಮಿಲ್ ಎದುರು ಜಮಾಯಿಸಿ ಧರಣಿ ನಡೆಸಿದ್ದಾರೆ.
ವಂಚನೆ ನಡೆದಿದ್ದು ಹೇಗೆ?
ಆರೋಪಿ ಶ್ರೀನಿವಾಸ ಎಂಬಾತ ದಾವಣಗೆರೆಯ ಮಾಗಾನಹಳ್ಳಿ ರಸ್ತೆಯಲ್ಲಿರುವ ‘ದಂಡೋತಿ ರೈಸ್ ಮಿಲ್’ ಅನ್ನು ಲೀಸ್‌ಗೆ (ಗುತ್ತಿಗೆ) ಪಡೆದು ಭತ್ತದ ವ್ಯಾಪಾರ ನಡೆಸುತ್ತಿದ್ದ. ಆರಂಭದಲ್ಲಿ ರೈತರ ವಿಶ್ವಾಸ ಗಳಿಸಲು ಮುಂಗಡ ಹಣ ನೀಡಿ ಎರಡು ಲೋಡ್ ಭತ್ತ ಖರೀದಿಸಿದ್ದ. ಬಳಿಕ, ಕ್ವಿಂಟಾಲ್‌ಗೆ ₹4,350 ದರ ನಿಗದಿಪಡಿಸಿ ಹಾವೇರಿ ಭಾಗದ ರೈತರಿಂದ ಸುಮಾರು 5,000 ಚೀಲ ಭತ್ತವನ್ನು ಖರೀದಿಸಿದ್ದಾನೆ.
ನಕಲಿ ಭರವಸೆ, ಚೆಕ್ ನೀಡಿ ವಂಚನೆ:
ಭತ್ತ ಖರೀದಿಸಿದ ಬಳಿಕ ಬಣ್ಣದ ಮಾತುಗಳನ್ನಾಡಿ ಹಣ ಪಾವತಿಸುವುದಾಗಿ ದಿನ ದೂಡುತ್ತಿದ್ದ ಶ್ರೀನಿವಾಸ, ಕೆಲವು ರೈತರಿಗೆ ಚೆಕ್‌ಗಳನ್ನು ನೀಡಿದ್ದನು. ಆದರೆ ಖಾತೆಯಲ್ಲಿ ಹಣವಿಲ್ಲದೆ ಚೆಕ್‌ಗಳು ಬೌನ್ಸ್ ಆಗಿದ್ದು, ಇದೀಗ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ರೈತರು ದೂರಿದ್ದಾರೆ. ಈತ ಈ ಹಿಂದೆ ತೆಲಂಗಾಣದಲ್ಲೂ ಇದೇ ರೀತಿ ರೈತರಿಗೆ ವಂಚನೆ ಎಸಗಿರುವ ಆರೋಪವಿದೆ.
ಭತ್ತ ಸಾಗಾಟಕ್ಕೆ ಯತ್ನ – ತಡೆದ ರೈತರು:
ನ್ಯಾಯಕ್ಕಾಗಿ 40ಕ್ಕೂ ಹೆಚ್ಚು ರೈತರು ರೈಸ್ ಮಿಲ್ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲೇ, ಮಿಲ್‌ನಲ್ಲಿದ್ದ ಭತ್ತ ತುಂಬಿದ ಲಾರಿಯನ್ನು ಬೇರೆಡೆಗೆ ಸಾಗಿಸಲು ಯತ್ನಿಸಲಾಗಿದೆ. ಇದನ್ನು ಗಮನಿಸಿದ ರೈತರು ತಕ್ಷಣವೇ ಲಾರಿಯನ್ನು ಅಡ್ಡಗಟ್ಟಿ ತಡೆದಿದ್ದು, ಮತ್ತೆ ರೈಸ್ ಮಿಲ್ ಆವರಣಕ್ಕೆ ತಂದು ನಿಲ್ಲಿಸಿದ್ದಾರೆ.
ಪೊಲೀಸರ ಭೇಟಿ, ದಾಸ್ತಾನು ಜಪ್ತಿಗೆ ಆಗ್ರಹ:
ಘಟನಾ ಸ್ಥಳಕ್ಕೆ ದಾವಣಗೆರೆಯ ಆಜಾದ್ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ವಂಚಕ ಶ್ರೀನಿವಾಸನನ್ನು ತಕ್ಷಣ ಬಂಧಿಸಬೇಕು ಹಾಗೂ ರೈಸ್ ಮಿಲ್‌ನಲ್ಲಿರುವ ಭತ್ತದ ದಾಸ್ತಾನನ್ನು ಜಪ್ತಿ ಮಾಡಿ, ಅದನ್ನು ಮಾರಾಟ ಮಾಡಿ ತಮ್ಮ ಬಾಕಿ ಹಣವನ್ನು ಕೊಡಿಸಬೇಕು ಎಂದು ಸಂತ್ರಸ್ತ ರೈತರು ಪೊಲೀಸರು ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.