ರಾಯಚೂರು: “ಕರ್ನಾಟಕದಲ್ಲಿ ಯಾವ ಕುರ್ಚಿಗಳೂ ಅಲ್ಲಾಡುತ್ತಿಲ್ಲ, ರಾಜ್ಯ ಸರ್ಕಾರದ ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ. ಪ್ರಧಾನಿಯವರ ಕಣ್ಣಿಗೆ ಏನು ಕಾಣುತ್ತಿದೆಯೋ ನಮಗೆ ಗೊತ್ತಿಲ್ಲ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಯಚೂರಿನ ಲಿಂಗಸಗೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ ಹಾಗೂ ಕೇರಳ, ಪಂಜಾಬ್‌ನಲ್ಲೂ ಇದೇ ಪರಿಸ್ಥಿತಿ ಇದೆ ಎಂಬ ಪ್ರಧಾನಿಯವರ ಹೇಳಿಕೆಯನ್ನು ತಳ್ಳಿಹಾಕಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಇದೇ ವೇಳೆ ಸಚಿವ ಡಿ. ಸುಧಾಕರ್ ಅವರ ನಿಧನದ ಕುರಿತು ಮಾತನಾಡಿದ ಡಿಸಿಎಂ, “ಭದ್ರಾ ಮೇಲ್ದಂಡೆ ಯೋಜನೆ ಉದ್ಘಾಟನೆಯ ಸಂದರ್ಭದಲ್ಲಿ ಸುಧಾಕರ್ ಅವರು ನಮ್ಮೊಂದಿಗೆ ಇರಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ಇದು ಅತ್ಯಂತ ದುರದೃಷ್ಟಕರ,” ಎಂದು ಬೇಸರ ವ್ಯಕ್ತಪಡಿಸಿದರು.
ಸುಧಾಕರ್ ಅವರ ವ್ಯಕ್ತಿತ್ವವನ್ನು ಸ್ಮರಿಸಿದ ಡಿ.ಕೆ. ಶಿವಕುಮಾರ್, “ಅವರು ನನ್ನನ್ನು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗಲೆಲ್ಲಾ ಸದಾ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆಯೇ ಚರ್ಚಿಸುತ್ತಿದ್ದರು. ಜೈನ ಸಮುದಾಯಕ್ಕೆ ಸೇರಿದವರಾಗಿದ್ದರೂ, ಎಲ್ಲಾ ಸಮುದಾಯದ ಜನರನ್ನು ಪ್ರೀತಿಯಿಂದ ಕಾಣುವ ಹೃದಯ ಶ್ರೀಮಂತಿಕೆ ಹೊಂದಿದ್ದರು. ಅವರ ಸಾವು ಸರ್ಕಾರಕ್ಕೆ ಮತ್ತು ಅವರ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ವೈಯಕ್ತಿಕವಾಗಿ ನನಗೂ ಇದು ದೊಡ್ಡ ಆಘಾತ ನೀಡಿದೆ,” ಎಂದು ಸಂತಾಪ ಸೂಚಿಸಿದರು.