ರಾಣೇಬೆನ್ನೂರು: ರಸ್ತೆ ದುರಸ್ತಿ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ಅತಿವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘೋರ ದುರಂತ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದ ನಿವಾಸಿಗಳಾದ ಶೈಲವ್ವ ಮೇಕಳಿ (55) ಹಾಗೂ ಪವಿತ್ರಾ ಚೂರಿ (40) ಮೃತಪಟ್ಟ ದುರದೃಷ್ಟಕರ ಮಹಿಳೆಯರು.
ದುರಂತದ ವಿವರ:
ಸದರಿ ರಾಜ್ಯ ಹೆದ್ದಾರಿಯಲ್ಲಿ ಕಾರ್ಮಿಕರು ರಸ್ತೆ ದುರಸ್ತಿ ಕೆಲಸ ಮಾಡುತ್ತಿದ್ದಾಗ, ಗುತ್ತಲದಿಂದ ರಾಣೇಬೆನ್ನೂರು ಕಡೆಗೆ ಅತಿವೇಗವಾಗಿ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕರ ಮೇಲೆ ಹರಿದಿದೆ. ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.