ಕಾರವಾರ: ಜಿಲ್ಲೆಯಲ್ಲಿ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಭರ್ಜರಿ ಯಶಸ್ಸು ಗಳಿಸಿದ್ದಾರೆ. ದೂರು ದಾಖಲಾದ ಕೇವಲ 24 ಗಂಟೆಗಳ ಒಳಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಕಾರವಾರದ ಗಿಂಡಿವಾಡ ಮೂಲದ ವಿನಯ ಅಲಿಯಾಸ್ ವಿನಾಯಕ ದಯಾನಂದ ಗಾಂವ್ಕರ್ (40) ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿಯಿಂದ ಅಂದಾಜು 87,000 ರೂ. ಮೌಲ್ಯದ ಒಟ್ಟು 174 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ದೇವಸ್ಥಾನದ ದೊಡ್ಡ ಘಂಟೆಗಳು, ದೀಪದ ಕಂಬಗಳು ಹಾಗೂ ಆರತಿ ತಟ್ಟೆಗಳು ಸೇರಿವೆ. ಆರೋಪಿಯ ವಿರುದ್ಧ ಕಾರವಾರ ಶಹರ, ಕಾರವಾರ ಗ್ರಾಮೀಣ ಮತ್ತು ಚಿತ್ತಾಕುಲಾ ಪೊಲೀಸ್ ಠಾಣೆಗಳಲ್ಲಿ ಜೂನ್ 06 ಮತ್ತು 07 ರಂದು ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು.
ಕಳೆದ ಕೆಲವು ದಿನಗಳ ಅಂತರದಲ್ಲಿ ಕಾರವಾರ ತಾಲೂಕಿನಾದ್ಯಂತ ಸುಮಾರು 6 ರಿಂದ 7 ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆದಿತ್ತು. ಆದರೆ, ಈ ಖದೀಮ ಹುಂಡಿಯಲ್ಲಿದ್ದ ಹಣ ಮುಟ್ಟದೆ, ಕೇವಲ ಲೋಹದ ಪೂಜಾ ವಸ್ತುಗಳನ್ನಷ್ಟೇ ಕದಿಯುತ್ತಿದ್ದ. ಇವು ಕಡಿಮೆ ಮೌಲ್ಯದ ವಸ್ತುಗಳೆಂದು ಭಾವಿಸಿದ ಬಹುತೇಕ ದೇವಾಲಯದ ಆಡಳಿತ ಮಂಡಳಿಗಳು ಪೊಲೀಸರಿಗೆ ದೂರು ನೀಡದೆ ನಿರ್ಲಕ್ಷ್ಯ ವಹಿಸಿದ್ದವು. ಇದು ಕಳ್ಳನಿಗೆ ಮತ್ತಷ್ಟು ಕಳ್ಳತನ ಮಾಡಲು ವರವಾಗಿ ಪರಿಣಮಿಸಿತ್ತು.
ಮೇ 20 ರಂದು ಕಾರವಾರದ ಹಬ್ಬುವಾಡ ರಸ್ತೆಯಲ್ಲಿರುವ ಪ್ರಸಿದ್ಧ ದಾಸಮಾರುತಿ ದೇವಸ್ಥಾನದಲ್ಲಿ ಸುಮಾರು 50 ಕೆ.ಜಿ ತೂಕದ ಬೃಹತ್ ಪೂಜಾ ಸಾಮಗ್ರಿಗಳು ಕಳುವಾಗಿದ್ದವು. ಈ ದೊಡ್ಡ ಮಟ್ಟದ ಕಳ್ಳತನದ ಕುರಿತು ಗ್ರೀನ್ ಸ್ಟ್ರೀಟ್ ನಿವಾಸಿ ಶಾಮಸುಂದರ ಎಂಬುವವರು ಜೂನ್ 06 ರಂದು ಕಾರವಾರ ಶಹರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ತಕ್ಷಣವೇ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದರು. ದೂರು ದಾಖಲಾದ ಕೇವಲ 24 ಗಂಟೆಗಳ ಮಿಂಚಿನ ಕಾರ್ಯಾಚರಣೆಯಲ್ಲಿ ಆಟೋ ಚಾಲಕನ ಮುಖವಾಡ ತೊಟ್ಟಿದ್ದ ಕಳ್ಳನನ್ನು ಪತ್ತೆ ಹಚ್ಚಿ, ಕಳುವಾಗಿದ್ದ ನೂರಾರು ಕೆಜಿ ತೂಕದ ಪೂಜಾ ಪರಿಕರಗಳನ್ನು ರಿಕವರಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.