ಕಾರವಾರ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ. ಶ್ಯಾಮ ಭಟ್ ಹಾಗೂ ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ಮಂಗಳವಾರ ಕಾರವಾರ ನಗರದ ವಿವಿಧ ಸರ್ಕಾರಿ ಇಲಾಖೆಗಳು, ವಸತಿ ನಿಲಯಗಳು ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಮೊದಲಿಗೆ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಭೇಟಿ ನೀಡಿದರು. ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದ ಅವರು, ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ವಸತಿ ನಿಲಯಗಳಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ನಂತರ ಕ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ತಂಡವು, ರೋಗಿಗಳಿಗೆ ಸಿಗುತ್ತಿರುವ ಚಿಕಿತ್ಸೆ ಮತ್ತು ಆಸ್ಪತ್ರೆಯ ನಿರ್ವಹಣೆಯನ್ನು ಗಮನಿಸಿದರು. ಅಲ್ಲಿಂದ ಜಿಲ್ಲಾ ಕಾರಾಗೃಹಕ್ಕೆ ತೆರಳಿದ ಅವರು, ಕೈದಿಗಳ ಸ್ಥಿತಿಗತಿ ಹಾಗೂ ಕುಂದುಕೊರತೆಗಳನ್ನು ಆಲಿಸಿ, ಕಾರಾಗೃಹದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಜಿಲ್ಲಾ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿನ ಸ್ವಚ್ಛತೆ ಮತ್ತು ಶೌಚಾಲಯಗಳ ಸ್ಥಿತಿಗತಿಯ ಬಗ್ಗೆ ತೀವ್ರ ನಿಗಾ ವಹಿಸಿದರು. ನಿಲ್ದಾಣದ ಆವರಣದಲ್ಲಿರುವ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿದ ಅವರು, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆಹಾರದ ಶುಚಿತ್ವ ಕಾಪಾಡುವಂತೆ ಸೂಚಿಸಿದರು.
ತಮ್ಮ ಪ್ರವಾಸದ ಭಾಗವಾಗಿ ಕಾರವಾರ ಗ್ರಾಮೀಣ ಹಾಗೂ ಶಹರ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿದ ತಂಡವು, ಠಾಣೆಯ ಕಾರ್ಯವೈಖರಿ ಹಾಗೂ ಮಾನವ ಹಕ್ಕುಗಳ ಪಾಲನೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಲ್ಲಾಭಕ್ಷ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೀರನಗೌಡ ಪಿ. ಏನಗಗೌಡರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಉಮೇಶ, ಜಿಲ್ಲಾ ಪರಿಸರ ಅಧಿಕಾರಿ ಸಂತೋಷ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.