ಕೋಲಾರ: ಗ್ರಾಮೀಣ ಭಾಗದ ರೈತರ ಕೃಷಿ ಪಂಪ್ಸೆಟ್ ಹಾಗೂ ದುಬಾರಿ ತಾಮ್ರದ ಕೇಬಲ್ಗಳನ್ನು ಸರಣಿ ಕಳ್ಳತನ ಮಾಡುತ್ತಾ ಅನ್ನದಾತರ ನಿದ್ದೆಗೆಡಿಸಿದ್ದ ಇಬ್ಬರು ಖದೀಮರನ್ನು ಗ್ರಾಮಸ್ಥರೇ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಶ್ಲಾಘನೀಯ ಘಟನೆ ಕೋಲಾರ ತಾಲೂಕಿನ ದೊಡ್ಡಹಸಾಳ ಗ್ರಾಮದಲ್ಲಿ ನಡೆದಿದೆ.
ಕೋಲಾರ ನಗರದ ಗಾಂಧಿನಗರ ನಿವಾಸಿಗಳಾದ ಚೇತನ್ ಮತ್ತು ಸುದೀಪ್ ಎಂಬುವವರೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಸದ್ಯ ಕಂಬಿ ಎಣಿಸುತ್ತಿರುವ ಕಳ್ಳರು. ದೊಡ್ಡಹಸಾಳ ಗ್ರಾಮದ ಜಮೀನೊಂದರಲ್ಲಿ ರೈತರು ಕೃಷಿ ಬೋರ್ವೆಲ್ಗೆ ಅಳವಡಿಸಿದ್ದ ದುಬಾರಿ ತಾಮ್ರದ ಕೇಬಲ್ ಅನ್ನು ಕತ್ತರಿಸಿ ಕದಿಯಲು ಈ ಇಬ್ಬರು ಹೊಂಚು ಹಾಕುತ್ತಿದ್ದರು. ಈ ವೇಳೆ ತೋಟದ ಕಡೆ ಬಂದ ಜಾಗರೂಕ ರೈತರು, ಇವರ ಶಂಕಾಸ್ಪದ ಚಲನವಲನವನ್ನು ಗಮನಿಸಿ ತಕ್ಷಣವೇ ಸುತ್ತುವರಿದು ಸ್ಥಳದಲ್ಲೇ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರನ್ನು ಹಿಡಿದ ಬೆನ್ನಲ್ಲೇ ಗ್ರಾಮಸ್ಥರು ಒಟ್ಟಾಗಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ಇಬ್ಬರನ್ನೂ ಕಾನೂನು ಬಾಹಿರ ಕೃತ್ಯದ ಸಾಕ್ಷ್ಯ ಸಮೇತ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸ್ಥಳೀಯ ರೈತರ ಪ್ರಕಾರ, ದೊಡ್ಡಹಸಾಳ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ರೈತರ ಪಂಪ್ಸೆಟ್ಗಳು, ಸ್ಟಾರ್ಟರ್ ಬಾಕ್ಸ್ಗಳು ಹಾಗೂ ಬೆಲೆಬಾಳುವ ಕೇಬಲ್ಗಳು ವ್ಯವಸ್ಥಿತವಾಗಿ ಕಳ್ಳತನವಾಗುತ್ತಿದ್ದವು. ಇದರಿಂದ ಬೇಸತ್ತಿದ್ದ ಈ ಭಾಗದ ಅನ್ನದಾತರು ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಕಳ್ಳತನದ ಜಾಲದ ಪ್ರಮುಖ ಆರೋಪಿಗಳೇ ನೇರವಾಗಿ ರೈತರ ಕೈಗೆ ಸಿಕ್ಕಿಬಿದ್ದಿರುವುದರಿಂದ ಇಷ್ಟು ದಿನ ಕಂಗಾಲಾಗಿದ್ದ ಈ ಭಾಗದ ಅನ್ನದಾತರು ನಿಟ್ಟುಸಿರು ಬಿಡುವಂತಾಗಿದೆ.
ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು, ಇವರ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ನಿಟ್ಟಿನಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.