Skip to main content

Police Roundup

ನಂದಿನಿ ಮೊಸರಿನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂದು ಸುಳ್ಳು ಪ್ರಚಾರ: ಮದ್ದೂರು ಮೂಲದ ಆರೋಪಿ ಬಂಧನ

Share News

ಮದ್ದೂರು: ನಂದಿನಿ ಮೊಸರಿನ ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಿ, ಮಂಡ್ಯ ಹಾಲು ಒಕ್ಕೂಟದ (ಮನ್‌ಮುಲ್) ಪ್ರತಿಷ್ಠೆಗೆ ಧಕ್ಕೆ ತಂದಿದ್ದ ಆರೋಪಿಯನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಚನ್ನಸಂದ್ರ ಗ್ರಾಮದ ಶಿವಲಿಂಗಯ್ಯ ಅವರ ಪುತ್ರ ಅರುಣ್ ಕುಮಾರ್ (35) ಬಂಧಿತ ಆರೋಪಿ.

 

ಪ್ರಕರಣದ ಹಿನ್ನೆಲೆ:

ಮನ್‌ಮುಲ್ ಮಾರುಕಟ್ಟೆಯ ಬ್ರ್ಯಾಂಡ್ ಮೌಲ್ಯಕ್ಕೆ ಕಳಂಕ ತರುವ ಉದ್ದೇಶದಿಂದ ಅರುಣ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದನು. ಈ ಕುರಿತು ಮನ್‌ಮುಲ್ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಮದ್ದೂರು ಠಾಣೆಯ ಸಿಪಿಐ ನವೀನ್ ಮತ್ತು ಸಿಬ್ಬಂದಿ, ಶುಕ್ರವಾರ ಸಂಜೆ ಆರೋಪಿಯ ನಿವಾಸದಲ್ಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.

 

ವಿಚಾರಣೆ ವೇಳೆ ಸತ್ಯ ಬಯಲು:

ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಅರುಣ್ ಕುಮಾರ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. “ಮಂಗಳವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ನಂದಿನಿ ಪಾರ್ಲರ್‌ನಲ್ಲಿ ಮೊಸರಿನ ಪ್ಯಾಕೆಟ್ ಖರೀದಿಸಿದ್ದೆ. ಮನೆಯಲ್ಲಿ ಮೊಸರನ್ನು ಪಾತ್ರೆಗೆ ಸುರಿಯುತ್ತಿದ್ದಾಗ, ಕವರ್‌ನಲ್ಲಿದ್ದ ಜಿಯೋ ಸಿಮ್ ಜಾರಿ ಮೊಸರಿನಲ್ಲಿ ಬಿದ್ದಿತ್ತು. ಇದನ್ನೇ ಬಳಸಿಕೊಂಡು ಮೊಸರಿನ ಪ್ಯಾಕೆಟ್‌ನಲ್ಲೇ ಸಿಮ್ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆ” ಎಂದು ಹೇಳಿಕೆ ನೀಡಿದ್ದಾನೆ. ಅಲ್ಲದೆ, ಆ ಸಿಮ್ ಕಾರ್ಡ್ ತನ್ನ ಪತ್ನಿ ಎನ್. ಸುಧಾ ಅವರ ಹೆಸರಿನಲ್ಲಿದೆ ಎಂಬ ಸತ್ಯವನ್ನೂ ಬಾಯ್ಬಿಟ್ಟಿದ್ದಾನೆ.

 

ಮನ್‌ಮುಲ್ ಅಧ್ಯಕ್ಷರ ಪ್ರತಿಕ್ರಿಯೆ:

“ನಂದಿನಿ ಉತ್ಪನ್ನಗಳ ಜನಪ್ರಿಯತೆಯನ್ನು ಸಹಿಸದೆ, ಖಾಸಗಿ ಡೈರಿಗಳೊಂದಿಗೆ ಶಾಮೀಲಾಗಿ ಬ್ರ್ಯಾಂಡ್‌ಗೆ ಕಳಂಕ ತರುವ ಉದ್ದೇಶದಿಂದ ಅರುಣ್ ಕುಮಾರ್ ಇಂತಹ ಸುಳ್ಳು ಆರೋಪಗಳನ್ನು ಮಾಡಿದ್ದಾನೆ” ಎಂದು ಮನ್‌ಮುಲ್ ಅಧ್ಯಕ್ಷ ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin