ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ ‘ಟ್ಯಾಬ್ಲೆಟ್ ಆರೀಫ್’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಮೇ 25ರಂದು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಡೀಲ್ ಬಜಾಲ್ ನಂತೂರು ಬಳಿಯ ನಿವಾಸಿಯಾದ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು (21) ಬಂಧಿತ ಆರೋಪಿಯಾಗಿದ್ದಾನೆ. ಈತನು ಮೃತ ರೌಡಿಶೀಟರ್ “ಟೊಪ್ಪಿ ನೌಫಾಲ್” ಎಂಬಾತನ ಸಹೋದರ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮಾರ್ಚ್ 27ರಂದು ಬೆಳಗ್ಗಿನ ಜಾವ, ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಆರೀಫ್‌ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಡಿಕ್ಕಿ ಹೊಡೆಸಿ ಕೆಡವಿತ್ತು. ಬಳಿಕ ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿ ಕೊಲೆಗೈದಿತ್ತು. ಕೃತ್ಯ ಎಸಗಿದ ನಂತರ ಆರೋಪಿಗಳು ತಾವು ಬಳಸಿದ್ದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ತೀವ್ರತೆಯನ್ನು ಪರಿಗಣಿಸಿ ಪ್ರಕರಣವನ್ನು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು.
ಪ್ರಸ್ತುತ ಬಂಧಿತನಾಗಿರುವ ಆರೋಪಿ ಮೊಹಮ್ಮದ್ ಇಬ್ರಾಹಿಂ, 2026ರ ಫೆಬ್ರವರಿಯಲ್ಲೇ ಆರೀಫ್ ಹುಸೇನ್ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಅಲ್ಲದೆ, ಮಾಚ್೯ 27ರಂದು ನಡೆದ ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳಿಗೆ ಈತ ಹಣಕಾಸಿನ ನೆರವು ನೀಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯ ವಿರುದ್ಧ ಈಗಾಗಲೇ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ:
2024: ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ.
2025: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗಾಗಲೇ ತೀವ್ರ ಕಾರ್ಯಾಚರಣೆ ನಡೆಸಿ ಮೊಹಮ್ಮದ್ ರಿಫಾತ್ ಆಲಿ, ಇಬ್ರಾಹಿಂ ಖಲೀಲ್, ಅಶ್ಫಕ್, ಉಮ್ಮರ್ ಫಾರೂಕ್ ಇರ್ಫಾನ್, ಮೊಹಮ್ಮದ್ ಶಾಕೀರ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಇರ್ಷಾದ್, ಮಹಮ್ಮದ್ ಹರ್ಷಾದ್, ನಿಶಾಕ್, ಬಿ. ಜುನೈದ್ ಹಾಗೂ ಮೊಹಮ್ಮದ್ ಸುಹೇಲ್ ಸೇರಿದಂತೆ ಒಟ್ಟು 11 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಇಬ್ರಾಹಿಂ ಸಿನಾನ್ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 12ಕ್ಕೇರಿದೆ.
ಬಂಧಿತ ಆರೋಪಿಗಳೆಲ್ಲರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಇವರೆಲ್ಲರ ವಿರುದ್ಧ ಕಠಿಣ “ಕೋಕಾ ಕಾಯಿದೆ” (KCOCA) ಅಡಿಯಲ್ಲಿ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.