ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಜಿಲ್ಲಾ ಆನೆ ಕಾರ್ಯಪಡೆಯನ್ನು (Elephant Task Force) ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 10 ಬೈಕ್ ಸೇರಿದಂತೆ ಒಟ್ಟು 13 ಹೊಸ ವಾಹನಗಳನ್ನು ಇಲಾಖೆಗೆ ಸೇರ್ಪಡೆಗೊಳಿಸಲಾಗಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಚಿವರು 1 ಸ್ಕಾರ್ಪಿಯೋ, 2 ಕ್ಯಾಂಪರ್ ಹಾಗೂ 10 ದ್ವಿಚಕ್ರ ವಾಹನಗಳಿಗೆ ಹಸಿರು ನಿಶಾನೆ ತೋರಿದರು. ವಿಶೇಷವೆಂದರೆ, ಸಚಿವರೇ ಸ್ವತಃ ಬೈಕ್ ಓಡಿಸುವ ಮೂಲಕ ವಾಹನಗಳ ಕಾರ್ಯಾಚರಣೆಗೆ ಚಾಲನೆ ನೀಡಿದ್ದು ಗಮನಸೆಳೆಯಿತು.
ಧ್ವನಿವರ್ಧಕ ಮತ್ತು ವಾಕಿಟಾಕಿ: ಈ ಎಲ್ಲ ವಾಹನಗಳಿಗೆ ಹೈಟೆಕ್ ವಾಕಿಟಾಕಿ ಮತ್ತು ಧ್ವನಿವರ್ಧಕಗಳನ್ನು (Loudspeakers) ಅಳವಡಿಸಲಾಗಿದೆ.
ತ್ವರಿತ ಮಾಹಿತಿ: ಆನೆಗಳು ಕಾಫಿ ತೋಟ ಅಥವಾ ಜನವಸತಿ ಪ್ರದೇಶಗಳಿಗೆ ನುಗ್ಗಿದಾಗ, ಕಾರ್ಯಪಡೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಿದ್ದಾರೆ.
ಗಸ್ತು ಕಾರ್ಯಾಚರಣೆ: ದ್ವಿಚಕ್ರ ವಾಹನಗಳ ಬಳಕೆಯಿಂದ ಅರಣ್ಯದ ಕಿರಿದಾದ ದಾರಿಗಳಲ್ಲೂ ಸುಲಭವಾಗಿ ಸಂಚರಿಸಿ ಆನೆಗಳ ಚಲನವಲನದ ಮೇಲೆ ನಿಗಾ ಇರಿಸಲು ಸಾಧ್ಯವಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು, “ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತನ್ನ ಸಿ.ಎಸ್.ಆರ್ (CSR) ನಿಧಿಯ ಅಡಿಯಲ್ಲಿ ಈ ವಾಹನಗಳನ್ನು ಅರಣ್ಯ ಇಲಾಖೆಗೆ ಕೊಡುಗೆಯಾಗಿ ನೀಡಿದೆ. ಇದು ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸುವಲ್ಲಿ ಹೊಸ ಉಪಕ್ರಮವಾಗಲಿದೆ” ಎಂದು ತಿಳಿಸಿದರು. ಇದೇ ವೇಳೆ ಸಚಿವರು ಆನೆ ಕಾರ್ಯಪಡೆ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ, ಅವರ ಸವಾಲುಗಳ ಬಗ್ಗೆ ಮಾಹಿತಿ ಪಡೆದರು.
ಈ ಹೊಸ ವಾಹನಗಳ ಸೇರ್ಪಡೆಯಿಂದಾಗಿ ಹಾಸನ ಜಿಲ್ಲೆಯ ಜನರಲ್ಲಿ ಆನೆ ಹಾವಳಿಯ ಭೀತಿ ತುಸು ಕಡಿಮೆಯಾಗುವ ನಿರೀಕ್ಷೆಯಿದೆ.