ವಿಶ್ವಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನದಲ್ಲಿ ಭಕ್ತರ ಸೋಗಿನಲ್ಲಿ ಬಂದು ಮಹಿಳೆಯ ಸರಗಳ್ಳತನ ಮಾಡಿದ್ದ ಅಂತರ ಜಿಲ್ಲಾ ಮಹಿಳಾ ಆರೋಪಿಯನ್ನು ಮುರ್ಡೇಶ್ವರ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತಳಿಂದ ಅಂದಾಜು 3,28,000 ರೂ. ಮೌಲ್ಯದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳದ ಕಣ್ಣೂರು ಮೂಲದ ಜೈಯಂತ ಎ.ವಿ. ವೇಣುಗೋಪಾಲ ಎಂಬುವವರು ಏಪ್ರಿಲ್ 24ರಂದು ತಮ್ಮ ಕುಟುಂಬದೊಂದಿಗೆ ಮುರ್ಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದ ಜನಸಂದಣಿಯ ಲಾಭ ಪಡೆದ ಕಿಡಿಗೇಡಿಗಳು, ಜೈಯಂತ ಅವರ ತಾಯಿಯ ಕತ್ತಿನಲ್ಲಿದ್ದ ಸುಮಾರು 36 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿದ್ದರು. ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಾದ ಕೂಡಲೇ ತನಿಖೆ ಚುರುಕುಗೊಳಿಸಿದ ಪೊಲೀಸರು, ತಾಂತ್ರಿಕ ನೆರವು ಹಾಗೂ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದರು. ಗದಗ ಜಿಲ್ಲೆಯ ಬೆಟಗೇರಿಯ ಗಾಂಧಿ ನಗರ ಸೆಟ್ಲಮೆಂಟ್ ನಿವಾಸಿಯಾದ ಗಂಗಮ್ಮ (65) ಎಂಬಾಕೆಯನ್ನು ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಮಹಿಳೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕಳ್ಳತನದ ಕೃತ್ಯ ಒಪ್ಪಿಕೊಂಡಿದ್ದಾಳೆ. ಕದ್ದಿದ್ದ ಸರವನ್ನು ಕರಗಿಸಿ ಗಟ್ಟಿ ಮಾಡಿದ್ದ 27.600 ಗ್ರಾಂ ತೂಕದ ಎರಡು ಬಂಗಾರದ ಗಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್.ಪಿ) ದೀಪನ್ ಎನ್. ಎಂ., ಹೆಚ್ಚುವರಿ ಎಸ್.ಪಿ ಕೃಷ್ಣಮೂರ್ತಿ ಜಿ., ಭಟ್ಕಳ ಡಿವೈಎಸ್ಪಿ ಗಿರೀಶ ಬಿ. ಹಾಗೂ ಸಿಪಿಐ ಜಗದೀಶ ಹಂಚನಾಳ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಮುರ್ಡೇಶ್ವರ ಪಿಎಸ್‌ಐಗಳಾದ ಹಣಮಂತ ಬಿರಾದಾರ ಮತ್ತು ಲೋಕನಾಥ ರಾಥೋಡ ಅವರ ನೇತೃತ್ವದ ತಂಡದಲ್ಲಿ ಸಿಬ್ಬಂದಿಗಳಾದ ವನಿತಾ ನಾಯ್ಕ, ಮಂಜುನಾಥ ಲಕ್ಕಾಪುರ, ಸಿದ್ದಪ್ಪ ಕಾಂಬಳೆ ಹಾಗೂ ವಿಜಯ ನಾಯ್ಕ ಪಾಲ್ಗೊಂಡಿದ್ದರು. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಮಾಲು ವಶಪಡಿಸಿಕೊಂಡ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಎಸ್.ಪಿ ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.