Skip to main content

Police Roundup

ಖಾಸಗಿ ಫೈನಾನ್ಸ್ ಕಿರುಕುಳ: ಮನೆಗೆ ಬೀಗ ಜಡಿದು ಕುಟುಂಬವನ್ನು ಬೀದಿಗೆ ತಳ್ಳಿದ ಸಿಬ್ಬಂದಿ; ತಹಸೀಲ್ದಾರ್ ಕಚೇರಿ ಮುಂದೆ ವಿಷ ಸೇವಿಸುವ ಎಚ್ಚರಿಕೆ!

Share News

ನಂಜನಗೂಡು: ಮೈಕ್ರೋ ಫೈನಾನ್ಸ್ ಕಂಪನಿಗಳ ದೌರ್ಜನ್ಯ ಮತ್ತು ಕಿರುಕುಳಕ್ಕೆ ಬ್ರೇಕ್ ಹಾಕಲು ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದರೂ, ಗ್ರಾಮೀಣ ಭಾಗದಲ್ಲಿ ಖಾಸಗಿ ಫೈನಾನ್ಸ್‌ಗಳ ಹಾವಳಿ ಮಾತ್ರ ನಿಂತಿಲ್ಲ. ಸಾಲದ ಕಂತು ತಡವಾಗಿದೆ ಎಂಬ ಒಂದೇ ಕಾರಣಕ್ಕೆ ವೃದ್ಧೆಯೊಬ್ಬರ ಮನೆಗೆ ಕಾನೂನುಬಾಹಿರವಾಗಿ ಬೀಗ ಜಡಿದು, ಇಡೀ ಕುಟುಂಬವನ್ನೇ ಬೀದಿಗೆ ತಳ್ಳಿರುವ ಅಮಾನವೀಯ ಘಟನೆ ನಂಜನಗೂಡು ತಾಲೂಕಿನ ಕಾಟೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನ್ಯಾಯ ಸಿಗದಿದ್ದರೆ ವಿಷ ಸೇವಿಸುವುದಾಗಿ ನೊಂದ ಕುಟುಂಬ ತಹಸೀಲ್ದಾರ್‌ಗೆ ಎಚ್ಚರಿಕೆ ನೀಡಿದೆ.

 

ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಟೂರು ಗ್ರಾಮದ ನಿವಾಸಿ ರೇವಮ್ಮ ಎಂಬುವರೇ ಫೈನಾನ್ಸ್ ಕಿರುಕುಳಕ್ಕೆ ಸಿಲುಕಿ ಬೀದಿಗೆ ಬಿದ್ದಿರುವ ದುರ್ದೈವಿ. ರೇವಮ್ಮ ಅವರು ಎರಡು ವರ್ಷಗಳ ಹಿಂದೆ ತಮ್ಮ ಸೊಸೆ ರೇಖಾ ಹೆಸರಿನಲ್ಲಿ ‘ಇಕ್ವಿಟಾಸ್ ಸ್ಮಾಲ್ ಫೈನಾನ್ಸ್’ (Equitas Small Finance) ಸಂಸ್ಥೆಯಿಂದ 3.15 ಲಕ್ಷ ರೂ. ಸಾಲ ಪಡೆದಿದ್ದರು. ಇದಕ್ಕೆ ಪ್ರತಿ ತಿಂಗಳು ತಪ್ಪದೇ 7 ಸಾವಿರ ರೂ. ಕಂತು ಪಾವತಿಸುತ್ತಿದ್ದರು.

 

​ಆದರೆ, ಇತ್ತೀಚೆಗೆ ಕುಟುಂಬದಲ್ಲಿ ಎದುರಾದ ಅನಾರೋಗ್ಯದ ಸಮಸ್ಯೆಯಿಂದಾಗಿ ಕಳೆದ ಎರಡು ತಿಂಗಳ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ರೇವಮ್ಮ ಅವರ ಕುಟುಂಬ ಫೈನಾನ್ಸ್ ಕಚೇರಿಗೆ ತೆರಳಿ ಕಂತು ಪಾವತಿಸಲು ಸ್ವಲ್ಪ ಸಮಯಾವಕಾಶ ನೀಡುವಂತೆ ಮನವಿಯನ್ನೂ ಮಾಡಿತ್ತು. ಆದರೆ, ಮಾನವೀಯತೆಯನ್ನೇ ಮರೆತ ಫೈನಾನ್ಸ್ ಸಿಬ್ಬಂದಿ, ರೇವಮ್ಮ ಅವರು ಮನೆಯಲ್ಲಿ ಇಲ್ಲದ ಸಮಯ ನೋಡಿ ಏಕಾಏಕಿ ಮನೆಗೆ ಬೀಗ ಜಡಿದು, ನೋಟಿಸ್ ಅಂಟಿಸಿ ವಿಕೃತಿ ಮೆರೆದಿದ್ದಾರೆ.

 

ಫೈನಾನ್ಸ್ ಸಿಬ್ಬಂದಿಯ ಈ ದರ್ಪದಿಂದಾಗಿ ರೇವಮ್ಮ ಹಾಗೂ ಅವರ ಕುಟುಂಬಸ್ಥರು ಕಳೆದ 15 ದಿನಗಳಿಂದ ತಂಗಲು ನೆಲೆ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ತಾವೇ ಕಟ್ಟಿದ ಮನೆಗೆ ಬೀಗ ಬಿದ್ದಿರುವುದರಿಂದ, ರಾತ್ರಿ ವೇಳೆ ಮನೆ ಮುಂದಿನ ಜಗುಲಿ ಅಥವಾ ನೆರೆಹೊರೆಯವರ ಮನೆಗಳ ಮುಂದೆ ಮಲಗುವ ಅತ್ಯಂತ ಕರುಣಾಜನಕ ಪರಿಸ್ಥಿತಿ ಎದುರಾಗಿದೆ. ಇದರ ನಡುವೆ, ಫೈನಾನ್ಸ್ ಸಂಸ್ಥೆಯು ಈಗ ಏಕಾಏಕಿ ಒಂದೇ ಬಾರಿಗೆ 2.60 ಲಕ್ಷ ರೂ. ಬಾಕಿ ಹಣ ಪಾವತಿಸುವಂತೆ ತೀವ್ರ ಒತ್ತಡ ಹೇರುತ್ತಿದೆ ಎಂದು ರೇವಮ್ಮ ಕಣ್ಣೀರು ಹಾಕಿದ್ದಾರೆ.

 

ಖಾಸಗಿ ಫೈನಾನ್ಸ್‌ನ ಈ ದೌರ್ಜನ್ಯದ ವಿರುದ್ಧ ನ್ಯಾಯ ಕೇಳಲು ರೇವಮ್ಮ ಅವರು ನಂಜನಗೂಡು ತಾಲೂಕು ತಹಸೀಲ್ದಾರ್ ಅವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಆದರೆ, ಮನವಿ ನೀಡಿ ದಿನಗಳೇ ಕಳೆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.

 

​ಅಧಿಕಾರಿಗಳ ನಿರಾಸಕ್ತಿಯಿಂದ ಬೇಸತ್ತಿರುವ ರೇವಮ್ಮ ಕುಟುಂಬ, “ನಮಗೆ ನ್ಯಾಯ ದೊರೆಯದಿದ್ದಲ್ಲಿ ತಹಸೀಲ್ದಾರ್ ಕಚೇರಿ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೇ ನಮಗಿರುವ ಏಕೈಕ ದಾರಿ” ಎಂದು ತಹಸೀಲ್ದಾರ್‌ಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಿ ಎಚ್ಚರಿಕೆ ನೀಡಿದ್ದಾರೆ.

 

​ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಇಂತಹ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿಗೆ ಬಿದ್ದಿರುವ ರೇವಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin