Police Roundup

ಮಗುವಿನ ಪ್ರಾಣಕ್ಕಾಗಿ 3ನೇ ಮಹಡಿಯಿಂದ ಜಿಗಿದ ಮಹಾತಾಯಿ! ದೆಹಲಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ: 21 ಜನ ಸಜೀವ ದಹನ

Share News

ನವದೆಹಲಿ: ಹೆತ್ತ ಮಗುವಿನ ಪ್ರಾಣ ಉಳಿಸಲು ತಾಯಿಯೊಬ್ಬಳು ತನ್ನ ಜೀವದ ಹಂಗು ತೊರೆದು ಮೂರನೇ ಮಹಡಿಯಿಂದ ಜಿಗಿದ ರೋಮಾಂಚನಕಾರಿ ಹಾಗೂ ಮನಕಲಕುವ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮಾಲ್ವಿಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲ್‌ವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಜನರು ಸಜೀವ ದಹನವಾಗಿದ್ದು, ಭೀಕರತೆಯ ನಡುವೆಯೂ ತಾಯಿಯೊಬ್ಬಳ ಮಮತೆಯ ಸಾಹಸ ಸದ್ಯ ದೇಶದಾದ್ಯಂತ ವೈರಲ್ ಆಗಿದೆ.

​ಇಲ್ಲಿನ ‘ಫ್ಲೋರಿಶ್ ಸ್ಟೇ ಬೆಡ್ ಅಂಡ್ ಬ್ರೇಕ್ ಫಾಸ್ಟ್’ ಹೋಟೆಲ್‌ನ ನೆಲಮಾಳಿಗೆಯಲ್ಲಿ ಮುಂಜಾನೆ 8:48ರ ಸುಮಾರಿಗೆ ಈ ಅಗ್ನಿ ಅವಘಡ ಸಂಭವಿಸಿದೆ.

 

ಹೋಟೆಲ್‌ನ ನೆಲಮಾಳಿಗೆಯಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ, ಮೇಲಿನ ಮಹಡಿಯಲ್ಲಿದ್ದ ಪ್ರವಾಸಿಗರು ಕಿಟಕಿ ಗಾಜುಗಳನ್ನು ಮುರಿದು ರಕ್ಷಣೆಗಾಗಿ ಚೀರಾಡಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಸ್ಥಳೀಯರು ತಕ್ಷಣವೇ ತಮ್ಮ ಮನೆಗಳಲ್ಲಿದ್ದ ಹಾಸಿಗೆಗಳನ್ನು ತಂದು ಹೋಟೆಲ್ ಕೆಳಗೆ ನೆಲದ ಮೇಲೆ ಹಾಸಿದ್ದಾರೆ. ಈ ವೇಳೆ ಮೂರನೇ ಮಹಡಿಯಲ್ಲಿದ್ದ ತಾಯಿಯೊಬ್ಬರು ತನ್ನ ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡು, ಜೀವದ ಹಂಗು ತೊರೆದು ಕೆಳಗೆ ಹಾಸಿದ್ದ ಹಾಸಿಗೆಯ ಮೇಲೆ ಜಿಗಿದಿದ್ದಾರೆ. ಈ ಸಾಹಸದ ವೇಳೆ ತಾಯಿಯ ಕಾಲು ಮುರಿದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಸದ್ಯ ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಬೆನ್ನಲ್ಲೇ ಮತ್ತಿಬ್ಬರು ಮಹಿಳೆಯರು ಸಹ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

 

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ದೆಹಲಿ ಅಗ್ನಿಶಾಮಕ ದಳ (DFS) ಮತ್ತು ವಿಪತ್ತು ನಿರ್ವಹಣಾ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ 37ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಸ್ಯಾಕೆಟ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿವೆ. ಆದರೆ, ದುರದೃಷ್ಟವಶಾತ್ ಹೊಗೆ ಹಾಗೂ ಬೆಂಕಿಯ ಕೆನ್ನಾಲಿಕೆಗೆ ಸಿಲುಕಿ 21 ಜನರು ಸಾವನ್ನಪ್ಪಿದ್ದಾರೆ.

 

ಮೃತಪಟ್ಟವರಲ್ಲಿ ಚಿಕಿತ್ಸೆಗಾಗಿ ಭಾರತಕ್ಕೆ ಬಂದು ಈ ಹೋಟೆಲ್‌ನಲ್ಲಿ ತಂಗಿದ್ದ ಲೈಬೀರಿಯಾ, ನೈಜೀರಿಯಾ, ಮೊಜಾಂಬಿಕ್ ಮತ್ತು ಬಾಂಗ್ಲಾದೇಶದ 18 ವಿದೇಶಿ ಪ್ರಜೆಗಳು ಸೇರಿದ್ದಾರೆ ಎಂದು ದೆಹಲಿ ಪೊಲೀಸರು ಖಚಿತಪಡಿಸಿದ್ದಾರೆ. ಇದರೊಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಗುರುಗ್ರಾಮದಿಂದ ಬಂದು ಹೋಟೆಲ್‌ನಲ್ಲಿ ತಂಗಿದ್ದ ಒಂದೇ ಕುಟುಂಬದ 6 ಸದಸ್ಯರು ಸಹ ಈ ದುರಂತದಲ್ಲಿ ಭಸ್ಮವಾಗಿದ್ದಾರೆ. ಮೃತದೇಹಗಳು ಎಷ್ಟು ಭೀಕರವಾಗಿ ಸುಟ್ಟುಹೋಗಿವೆ ಎಂದರೆ ಫೋಟೋಗಳನ್ನು ನೋಡಿಯೂ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿದೆ.

 

​ಪ್ರಧಾನಿ ಮೋದಿ ಸಂತಾಪ – ಪರಿಹಾರ ಘೋಷಣೆ:

ಈ ಭೀಕರ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಧನವನ್ನು ಘೋಷಿಸಿದ್ದಾರೆ.

ಇನ್ನು ದೆಹಲಿ ಸಿಎಂ ರೇಖಾ ಗುಪ್ತಾ ಅವರು ಸಹ ಘಟನೆಗೆ ಕಂಬನಿ ಮಿಡಿದಿದ್ದು, ಗಾಯಾಳುಗಳಿಗೆ ಉಚಿತ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಅಲ್ಲದೆ, ಅಗ್ನಿ ಅವಘಡದ ನಿಖರ ಕಾರಣ ಪತ್ತೆಹಚ್ಚಲು ಕೂಲಂಕುಷ ತನಿಖೆಗೆ ಆದೇಶ ನೀಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin