ನೆಲಮಂಗಲ (ದಾಬಸ್ಪೇಟೆ):ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಾಮೋಹಕ್ಕೆ ಬಿದ್ದು ಹೆತ್ತ ಕರುಳು ಮತ್ತು ಕಟ್ಟಿಕೊಂಡ ಗಂಡನನ್ನು ಬಿಟ್ಟು ಪರಾರಿಯಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ಇಂತಹದ್ದೇ ಒಂದು ವಿಚಿತ್ರ ಹಾಗೂ ಕರುಣಾಜನಕ ಘಟನೆ ನಡೆದಿದ್ದು, ಇಬ್ಬರು ಮಕ್ಕಳ ತಾಯಿ ತನ್ನ ಪ್ರಿಯಕರನ ಜೊತೆ ಮನೆ ಬಿಟ್ಟು ಓಡಿಹೋಗಿರುವುದು ಇಡೀ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದೆ.
ಸ್ಥಳೀಯ ನಿವಾಸಿಯಾದ ಮಂಜುಳಾ ಎಂಬುವವರು ತಮ್ಮ ಮಗಳಾದ ಮೋನಿಕಾಳನ್ನು ಸ್ವಂತ ಸಹೋದರನಿಗೇ ಕೊಟ್ಟು ಧಾರೆ ಎರೆದಿದ್ದರು. ವಿವಾಹವಾದ ಬಳಿಕ ದಂಪತಿಗೆ ಇಬ್ಬರು ಮಕ್ಕಳಿದ್ದು, ಸಂಸಾರ ಸಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮೋನಿಕಾಳಿಗೆ ಹನುಮಂತ ಎಂಬ ವ್ಯಕ್ತಿಯ ಪರಿಚಯವಾಗಿದೆ. ದಿನಕಳೆದಂತೆ ಇವರಿಬ್ಬರ ನಡುವಿನ ಸ್ನೇಹವು ಅನೈತಿಕ ಪ್ರೇಮಕ್ಕೆ ತಿರುಗಿದೆ ಎನ್ನಲಾಗಿದೆ. ಮಗಳ ಈ ವಿಪರೀತ ವರ್ತನೆಯನ್ನು ಗಮನಿಸಿದ ತಾಯಿ ಮಂಜುಳಾ, ಸಂಸಾರ ಹಾಳು ಮಾಡಿಕೊಳ್ಳದಂತೆ ಮಗಳಿಗೆ ಹಲವು ಬಾರಿ ಬುದ್ಧಿ ಹೇಳಿ ಸರಿದಾರಿಗೆ ತರಲು ಯತ್ನಿಸಿದ್ದರು. ಆದರೆ, ಕಾಮದ ಕಣ್ಣುಳ್ಳ ಮೋನಿಕಾ ತಾಯಿಯ ಮಾತಿಗೆ ಕಿಂಚಿತ್ತೂ ಕಿವಿಕೊಟ್ಟಿರಲಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ನಡೆದ ದಿನ ತಾಯಿ ಮಂಜುಳಾ ಮತ್ತು ಮಗಳು ಮೋನಿಕಾ ಇಬ್ಬರೂ ಒಟ್ಟಿಗೆ ರೇಷನ್ (ಅಕ್ಕಿ-ಬೇಳೆ) ತರಲು ಮಾರುಕಟ್ಟೆಗೆ ತೆರಳಿದ್ದರು. ರೇಷನ್ ಅಂಗಡಿ ಬಳಿ ಬಂದಾಗ, “ನಾನು ಇಲ್ಲೇ ಪಕ್ಕದಲ್ಲಿ ಕೂಲ್ ಡ್ರಿಂಕ್ಸ್ ಕುಡಿದು, ತಗೊಂಡು ಬರ್ತೀನಿ” ಎಂದು ತಾಯಿಗೆ ಸುಳ್ಳು ಹೇಳಿ ಮೋನಿಕಾ ಅಲ್ಲಿಂದ ಹೊರಟಿದ್ದಾಳೆ. ಆದರೆ ಎಷ್ಟು ಹೊತ್ತಾದರೂ ಮಗಳು ವಾಪಸ್ ಬಾರದಿದ್ದಾಗ ತಾಯಿ ಗಾಬರಿಯಾಗಿದ್ದಾರೆ. ಸುತ್ತಮುತ್ತ ವಿಚಾರಿಸಿದಾಗ ಆಕೆ ಮೊದಲೇ ಹೊಂಚು ಹಾಕಿ ಕಾಯುತ್ತಿದ್ದ ಪ್ರಿಯಕರ ಹನುಮಂತನ ಜೊತೆ ಬೈಕ್ ಹತ್ತಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿರುವ ಇಬ್ಬರು ಕರಳು ಕುಡಿಗಳು ಅಮ್ಮ ಕಾಣದೇ ದಿನವಿಡೀ ಕಣ್ಣೀರು ಹಾಕುತ್ತಿದ್ದಾರೆ. “ಅಮ್ಮ ಯಾವಾಗ ಬರ್ತಾಳೆ ಅಜ್ಜಿ?” ಎಂದು ಮಕ್ಕಳು ಕೇಳುವ ನಿರಂತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಅಜ್ಜಿ ಮಂಜುಳಾ ಮಕ್ಕಳನ್ನು ಸಮಾಧಾನಪಡಿಸಲು ಕಣ್ಣೀರು ಹಾಕುತ್ತಾ ಪರದಾಡುತ್ತಿದ್ದಾರೆ. ಹೆತ್ತ ತಾಯಿಯೇ ತನ್ನ ಸುಖಕ್ಕಾಗಿ ಮಕ್ಕಳನ್ನು ಈ ಸ್ಥಿತಿಗೆ ತಳ್ಳಿರುವುದು ಇಡೀ ಕುಟುಂಬದಲ್ಲಿ ಆತಂಕ ಮತ್ತು ತೀವ್ರ ನೋವನ್ನು ಉಂಟುಮಾಡಿದೆ. ಈ ವಿಚಿತ್ರ ಪ್ರೇಮ ಪುರಾಣ ಸದ್ಯ ದಾಬಸ್ಪೇಟೆ ಸುತ್ತಮುತ್ತಲಿನ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕ್ಷಣಿಕ ಸುಖಕ್ಕಾಗಿ ಹೆತ್ತ ಕರುಳನ್ನೇ ಮರೆತು ಓಡಿಹೋಗುವ ಇಂತಹ ತಾಯಂದಿರ ವರ್ತನೆ ಇಡೀ ಸಮಾಜ ತಲೆತಗ್ಗಿಸುವಂತದ್ದು. ಕಣ್ಣೆದುರೇ ಅನಾಥರಂತೆ ಅಳುತ್ತಿರುವ ಆ ಇಬ್ಬರು ಮಕ್ಕಳ ಭವಿಷ್ಯದ ಜವಾಬ್ದಾರಿ ಯಾರದ್ದು? ಇಂತಹ ಘಟನೆಗಳು ಕೌಟುಂಬಿಕ ವ್ಯವಸ್ಥೆಯ ಪಾವಿತ್ರ್ಯತೆಯನ್ನೇ ಪ್ರಶ್ನಿಸುವಂತೆ ಮಾಡುತ್ತವೆ.