Police Roundup

ಸುಪ್ರೀಂ ಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ ‘ಸಮಾಧಾನ ಸಮಾರೋಹ-2026’ ವಿಶೇಷ ಅಭಿಯಾನ: ನ್ಯಾ. ದಿವ್ಯಶ್ರೀ ಸಿ.ಎಂ.

Share News

ಕಾರವಾರ: ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ‘ಸಮಾಧಾನ ಸಮಾರೋಹ-2026’ ಎಂಬ ವಿಶೇಷ ಲೋಕ ಅದಾಲತ್ ಆಯೋಜಿಸಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ದಿವ್ಯಶ್ರೀ ಸಿ.ಎಂ. ತಿಳಿಸಿದರು.

​ಗುರುವಾರ ಜಿಲ್ಲಾ ನ್ಯಾಯಾಲಯದ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ಹಂಚಿಕೊಂಡರು.

 

ಆಗಸ್ಟ್ 21, 22 ಮತ್ತು 23ರಂದು ಮೂರು ದಿನಗಳ ಕಾಲ ಈ ವಿಶೇಷ ಲೋಕ ಅದಾಲತ್ ನಡೆಯಲಿದೆ. ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಇಂತಹ ಬೃಹತ್ ಮಟ್ಟದ ‘ಸಮಾಧಾನ ಸಮಾರೋಹ’ವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಇದು ಕಕ್ಷಿದಾರರಿಗೆ ತಮ್ಮ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಇರುವ ಸುವರ್ಣಾವಕಾಶವಾಗಿದೆ ಎಂದರು.

 

ಸುಪ್ರೀಂ ಕೋರ್ಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 34 ಪ್ರಕರಣಗಳು ಬಾಕಿ ಇವೆ. ಅವುಗಳ ವಿವರ ಈ ಕೆಳಗಿನಂತಿದೆ:

​ಕೌಟುಂಬಿಕ ವಿವಾದಗಳು: 17

​ಸಿವಿಲ್ ಪ್ರಕರಣಗಳು: 09

​ಮೋಟಾರು ವಾಹನ ಅಪಘಾತ ಪರಿಹಾರ: 02

​ತೆರಿಗೆ ಸಂಬಂಧಿತ: 02

​ಭೂ ಸ್ವಾಧೀನ, ಕಾರ್ಮಿಕ ವಿವಾದ, ಚೆಕ್ ಅಮಾನ್ಯ ಹಾಗೂ ಸರ್ವಿಸ್ ಪ್ರಕರಣಗಳು: ತಲಾ 01

 

ಜಿಲ್ಲೆಯ ಸಾರ್ವಜನಿಕರು ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಈ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಗೂಗಲ್ ಶೀಟ್ ಲಿಂಕ್ ಬಳಸಿ ಅಥವಾ ನೇರವಾಗಿ ಹತ್ತಿರದ ತಾಲೂಕು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ವ್ಯಾಜ್ಯ ಪೂರ್ವ ಪ್ರಕರಣಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

​ಕಡಿಮೆ ವೆಚ್ಚದಲ್ಲಿ ಮತ್ತು ಶೀಘ್ರವಾಗಿ ನ್ಯಾಯ ಪಡೆಯಲು ಈ ವಿಶೇಷ ಅಭಿಯಾನವು ಅತ್ಯಂತ ಸಹಕಾರಿಯಾಗಿದ್ದು, ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನ್ಯಾಯಾಧೀಶರು ಮನವಿ ಮಾಡಿದರು.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin