Police Roundup

ರೋಡ್ ರೋಮಿಯೋಗಳಿಗೆ ನಡುರಸ್ತೆಯಲ್ಲೇ ‘ಬೆಂಡೆತ್ತಿದ’ ಯುಪಿ ಪೊಲೀಸರು: ಬಾಲಕಿಯರಿಗೆ ಕಿರುಕುಳ ನೀಡಿದ್ದ ಪುಂಡರ ಬಂಧನ

Share News

ಫತೇಪುರ (ಉತ್ತರ ಪ್ರದೇಶ): ಶಾಲಾ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸಿ, ಕೈ ಹಿಡಿದು ಎಳೆದಾಡಿದ್ದ ಇಬ್ಬರು ಬೀದಿ ಕಾಮುಕರಿಗೆ ಫತೇಪುರ ಪೊಲೀಸರು ನಡುರಸ್ತೆಯಲ್ಲೇ ಸರಿಯಾದ ಪಾಠ ಕಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ಮುನ್ನ ಪೊಲೀಸರು ನೀಡಿದ ‘ಬಿಸಿ’ ಮುಟ್ಟಿಸುವ ಚಿಕಿತ್ಸೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

ಉತ್ತರ ಪ್ರದೇಶದ ಫತೇಪುರದ ಕೊತ್ವಾಲಿ ವ್ಯಾಪ್ತಿಯ ಐಟಿಐ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿನಿಯರು ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಬಾಲಕಿಯರನ್ನು ಹಿಂಬಾಲಿಸಿ ಚುಡಾಯಿಸಿದ್ದಲ್ಲದೆ, ಅತಿರೇಕವೆಂಬಂತೆ ಒಬ್ಬ ಬಾಲಕಿಯ ಕೈ ಹಿಡಿದು ಎಳೆದಾಡಿದ್ದರು. ಈ ದೃಶ್ಯವು ಸ್ಥಳೀಯವಾಗಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

 

ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಎಚ್ಚೆತ್ತ ಫತೇಪುರ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಮೇಲೆ ಪೊಕ್ಸೊ (POCSO) ಕಾಯ್ದೆ ಹಾಗೂ ಲೈಂಗಿಕ ಕಿರುಕುಳದ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.

 

ಬಂಧನದ ನಂತರ ಪೊಲೀಸರು ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋ ಸಖತ್ ವೈರಲ್ ಆಗಿದೆ. ಪೊಲೀಸರ ಅತಿಥ್ಯದ ನಂತರ ಆರೋಪಿಗಳು ಸರಿಯಾಗಿ ನಡೆಯಲು ಸಾಧ್ಯವಾಗದೆ ಕುಂಟುತ್ತಾ ಸಾಗುತ್ತಿರುವುದು ಮತ್ತು ಕೈ ಮುಗಿದು “ಇನ್ಯಾವತ್ತೂ ಇಂತಹ ತಪ್ಪು ಮಾಡುವುದಿಲ್ಲ” ಎಂದು ಅಂಗಲಾಚುತ್ತಿರುವುದು ಕಂಡುಬಂದಿದೆ.

 

​”ಬಾಲಕಿಯರ ಮತ್ತು ಮಹಿಳೆಯರ ರಕ್ಷಣೆ ನಮ್ಮ ಮೊದಲ ಆದ್ಯತೆ. ಕಾನೂನು ಕೈಗೆತ್ತಿಕೊಂಡು ಪುಂಡಾಟಿಕೆ ಮಾಡುವವರಿಗೆ ಇಂತಹದ್ದೇ ಕಠಿಣ ಶಿಕ್ಷೆ ಕಾದಿದೆ,” ಎಂದು ಎಸ್‌ಪಿ ಅಭಿಮನ್ಯು ಮಂಗಳಿಕ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

​ಬಾಲಕಿಯರಿಗೆ ಕಿರುಕುಳ ನೀಡುವವರಿಗೆ ಯುಪಿ ಪೊಲೀಸರು ನೀಡಿರುವ ಈ ‘ಸ್ಪೆಷಲ್ ಟ್ರೀಟ್‌ಮೆಂಟ್’ಗೆ ನೆಟ್ಟಿಗರು “ಇಂತಹವರಿಗೆ ಹೀಗೆ ಮಾಡಬೇಕು” ಎಂದು ಶಹಬ್ಬಾಸ್ ಎನ್ನುತ್ತಿದ್ದಾರೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin