ವಿಜಯವಾಡ (ಆಂಧ್ರಪ್ರದೇಶ): ನಗರದ ಕೃಷ್ಣಲಂಕಾ ಪ್ರದೇಶದ ಲಾಡ್ಜ್‌ವೊಂದರಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಪೈಡಿಶೆಟ್ಟಿ ಎರ್ರಮ್ಮ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಕಳೆದ ಎರಡು ದಿನಗಳಿಂದ ತಮ್ಮ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ಮೃತ ಎರ್ರಮ್ಮ ಅವರ ಪತಿ ಸೂರ್ಯರಾವ್‌ಪೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮಹಿಳೆಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದ ನಡುವೆಯೇ, ಬಸ್ ನಿಲ್ದಾಣದ ಎದುರಿರುವ ‘ರಾಮಯ್ಯ ಲಾಡ್ಜ್’ನ ಕೊಠಡಿಯೊಂದರಲ್ಲಿ ಎರ್ರಮ್ಮ ಅವರ ಮೃತದೇಹ ಪತ್ತೆಯಾಗಿದೆ.
ಪೊಲೀಸ್ ತನಿಖೆ ಚುರುಕು:
ಮೃತ ಎರ್ರಮ್ಮ ಅವರು ಯುವಕನೊಬ್ಬನೊಂದಿಗೆ ಲಾಡ್ಜ್‌ಗೆ ಆಗಮಿಸಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯುವಕನು ಮಹಿಳೆಯನ್ನು ಹತ್ಯೆಗೈದ ಬಳಿಕ ಕೊಠಡಿಗೆ ಹೊರಗಿನಿಂದ ಬೀಗ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೃಷ್ಣಲಂಕಾ ಮತ್ತು ಸೂರ್ಯರಾವ್‌ಪೇಟ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾಡ್ಜ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.