ಕೋಲ್ಕತ್ತಾ: ರಾಜಕೀಯ ಅಂದರೆ ಕೇವಲ ಹಣವಂತರು ಅಥವಾ ಪ್ರಭಾವಿಗಳ ಅಖಾಡ ಎಂಬ ಕಾಲವೊಂದಿತ್ತು. ಆದರೆ, ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇಂದು ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಅವರೇ ಬಿಜೆಪಿಯ ಕಲಿತಾ ಮಾಝಿ.
₹3000 ಸಂಬಳಕ್ಕೆ ಮನೆಗೆಲಸ:
ಕೆಲವೇ ದಿನಗಳ ಹಿಂದಿನವರೆಗೂ ಕಲಿತಾ ಮಾಝಿ ಅವರ ಬದುಕು ಅತ್ಯಂತ ಕಷ್ಟಕರವಾಗಿತ್ತು. ಪರರ ಮನೆಗಳಿಗೆ ಹೋಗಿ ಪಾತ್ರೆ ತೊಳೆಯುವುದು, ಕಸ ಬಳಿಯುವ ಕೆಲಸ ಮಾಡುತ್ತಿದ್ದ ಇವರಿಗೆ ತಿಂಗಳಿಗೆ ಸಿಗುತ್ತಿದ್ದ ಸಂಬಳ ಕೇವಲ 3,000 ರೂಪಾಯಿ. ಬಡತನದ ನಡುವೆಯೂ ಪ್ರಾಮಾಣಿಕ ಬದುಕು ನಡೆಸುತ್ತಿದ್ದ ಈಕೆಯ ಜೀವನದಲ್ಲಿ ಬಿಜೆಪಿ ನೀಡಿದ ಒಂದು ಅವಕಾಶ ಭಾರಿ ಬದಲಾವಣೆ ತಂದಿದೆ.
ಕಲಿತಾ ಮಾಝಿ ಅವರ ಹೋರಾಟದ ಗುಣ ಮತ್ತು ಜನಸಾಮಾನ್ಯರೊಂದಿಗಿನ ಒಡನಾಟವನ್ನು ಗುರುತಿಸಿದ ಭಾರತೀಯ ಜನತಾ ಪಕ್ಷ, ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಟಿಕೆಟ್ ನೀಡಿತು. ಹಣದ ಬಲವಿಲ್ಲದಿದ್ದರೂ, ಜನರ ಬೆಂಬಲದೊಂದಿಗೆ ಕಣಕ್ಕಿಳಿದ ಇವರು ಇಂದು ವಿಧಾನಸಭೆಯ ಮೆಟ್ಟಿಲೇರಿದ್ದಾರೆ.
ಆಸ್ಗ್ರಾಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಲಿತಾ ಮಾಝಿ ಅವರು ಆಡಳಿತಾರೂಢ ಟಿಎಂಸಿ (TMC) ಪಕ್ಷದ ಹಿರಿಯ ನಾಯಕನನ್ನು ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವ ಮೂಲಕ ಐತಿಹಾಸಿಕ ಜಯ ದಾಖಲಿಸಿದ್ದಾರೆ. ಈ ಮೂಲಕ ಸಾಮಾನ್ಯ ಮನೆಗೆಲಸದ ಮಹಿಳೆ ಈಗ ಕ್ಷೇತ್ರದ ಜನರ ಧ್ವನಿಯಾಗಿ ವಿಧಾನಸಭೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸರಳ ಬದುಕಿನ ಮಹಿಳೆಯನ್ನು ಗುರುತಿಸಿ ಅವರಿಗೆ ರಾಜಕೀಯ ವೇದಿಕೆ ಕಲ್ಪಿಸಿದ ಬಿಜೆಪಿ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ. ನೆಲಮಟ್ಟದ ಕಾರ್ಯಕರ್ತರನ್ನು ಮತ್ತು ಸಾಮಾನ್ಯ ಜನರನ್ನು ಅಧಿಕಾರಕ್ಕೆ ತರುವ ಮೂಲಕ ಭಾರತೀಯ ಜನತಾ ಪಕ್ಷವು ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದೆ.
ಕಲಿತಾ ಮಾಝಿ ಅವರ ಈ ಯಶೋಗಾಥೆ ಕಷ್ಟದಲ್ಲಿರುವ ಸಾವಿರಾರು ಜನರಿಗೆ ಮತ್ತು ರಾಜಕೀಯಕ್ಕೆ ಬರಬಯಸುವ ಸಾಮಾನ್ಯ ಜನರಿಗೆ ದೊಡ್ಡ ಸ್ಫೂರ್ತಿಯಾಗಿದೆ.