ಮಾಲೂರು: ಉಚಿತವಾಗಿ ಬಿಯರ್ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಮುಖಕ್ಕೆ ಮಾಸ್ಕ್ ಧರಿಸಿ ಬಂದ ಪುಡಿ ರೌಡಿಗಳ ಗುಂಪೊಂದು ಬಾರ್‌ಗೆ ನುಗ್ಗಿ ತಡರಾತ್ರಿ ಭೀಕರ ದಾಂದಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರಲಕ್ಕಿ ಗ್ರಾಮದಲ್ಲಿ ಸಂಭವಿಸಿದೆ.
ತೊರಲಕ್ಕಿ ಗ್ರಾಮದ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ಕಿಡಿಗೇಡಿಗಳ ಗ್ಯಾಂಗ್, ಬಿಯರ್ ಪಾರ್ಸಲ್ ಪಡೆದುಕೊಂಡು ಹಣ ನೀಡದೆ ನಿರ್ಗಮಿಸಲು ಯತ್ನಿಸಿದೆ. ಈ ವೇಳೆ ಬಾರ್ ಸಿಬ್ಬಂದಿ ಹಣ ಕೇಳಿದ್ದಕ್ಕೆ ಉದ್ಧಟತನ ಪ್ರದರ್ಶಿಸಿದ ರೌಡಿಗಳು, “ನಾವು ಬಂದರೆ ಉಚಿತವಾಗಿ ಬಿಯರ್ ಕೊಡಬೇಕು” ಎಂದು ಹೇಳಿ ಗಲಾಟೆ ಆರಂಭಿಸಿದ್ದಾರೆ.
ರಂಪಾಟ ನಡೆಸಿ ಬಾರ್‌ನಲ್ಲಿದ್ದ ಬಿಯರ್ ಬಾಟಲಿಗಳನ್ನು ಮನಬಂದಂತೆ ಜಖಂಗೊಳಿಸಿದ ಅಷ್ಟೇ ಅಲ್ಲದೆ, ಪುಗಸಟ್ಟೆ ಎಣ್ಣೆ ನೀಡಲು ನಿರಾಕರಿಸಿದ ಬಾರ್ ಕ್ಯಾಶಿಯರ್ ವರುಣ್ ಎಂಬುವವರ ಮೇಲೂ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ರೌಡಿಸಂ:
ಪುಡಿ ರೌಡಿಗಳು ಬಾರ್‌ನಲ್ಲಿ ನಡೆಸಿದ ಅಟ್ಟಹಾಸ ಹಾಗೂ ದಾಂಧಲೆಯ ಸಂಪೂರ್ಣ ದೃಶ್ಯಾವಳಿಗಳು ಬಾರ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಜೀವವಾಗಿ ಸೆರೆಯಾಗಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ (ಎಸ್‌ಪಿ) ಕನ್ನಿಕಾ ಸಿಕ್ರಿವಾಲ್ ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ದೌರ್ಜನ್ಯದ ಕುರಿತು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.