ಕೆ.ಆರ್. ಪೇಟೆ (ಮಂಡ್ಯ): ಸಾಲದ ಕಂತು ಪಾವತಿಸಲು ಸಮಯ ಕೇಳಿದರೂ ಲೆಕ್ಕಿಸದೆ, ಬಾಣಂತಿ ಮತ್ತು ಮೂರು ತಿಂಗಳ ಹಸುಗೂಸನ್ನು ಮನೆಯಿಂದ ಹೊರತಳ್ಳಿ ಮನೆಗೆ ಬೀಗ ಜಡಿದಿರುವ ಅಮಾನವೀಯ ಘಟನೆ ತಾಲ್ಲೂಕಿನ ಬಿ.ಬಿ. ಕಾವಲು ಗ್ರಾಮದಲ್ಲಿ ನಡೆದಿದೆ.
‘ಈಕ್ವಿಟಾಸ್ ಮೈಕ್ರೋ ಫೈನಾನ್ಸ್’ ಸಂಸ್ಥೆಯಿಂದ ಗ್ರಾಮದ ದೇವರಾಜು ಎಂಬುವವರ ಕುಟುಂಬವು ಸಾಲ ಪಡೆದಿತ್ತು. ಕುಟುಂಬದ ಆರ್ಥಿಕ ಪರಿಸ್ಥಿತಿ ಕ್ಷೀಣಿಸಿರುವ ಕಾರಣ ಸಾಲ ಮರುಪಾವತಿಸಲು ಕಾಲಾವಕಾಶ ನೀಡುವಂತೆ ಕುಟುಂಬಸ್ಥರು ಕಣ್ಣೀರಿಟ್ಟು ಮನವಿ ಮಾಡಿದ್ದರು. ಆದರೆ, ಸಂಸ್ಥೆಯ ಸಿಬ್ಬಂದಿ ಯಾವುದೇ ಮಾನವೀಯತೆ ತೋರದೆ ಬಾಣಂತಿ, ಮಗು ಹಾಗೂ ಅನಾರೋಗ್ಯಪೀಡಿತ ಮಹಿಳೆಯರನ್ನು ಬಲವಂತವಾಗಿ ಮನೆಯಿಂದ ಹೊರಹಾಕಿ ಬೀಗ ಜಡಿದಿದ್ದಾರೆ.
5 ದಿನಗಳಿಂದ ಬೀದಿಯಲ್ಲೇ ಕಾಲ ಕಳೆಯುತ್ತಿರುವ ಕುಟುಂಬ
ಫೈನಾನ್ಸ್ ಸಿಬ್ಬಂದಿಯ ಈ ದೌರ್ಜನ್ಯದಿಂದಾಗಿ ದಲಿತ ಕುಟುಂಬವು ಕಳೆದ ಐದು ದಿನಗಳಿಂದ ಸೂರಿಲ್ಲದೆ, ಚಳಿಯಲ್ಲೇ ಬೀದಿಯಲ್ಲಿ ನರಳುವಂತಾಗಿದೆ. ಹಸುಗೂಸಿನೊಂದಿಗೆ ತಾಯಿ ಪಡುತ್ತಿರುವ ಯಾತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೃಹತ್ ‘ತಮಟೆ ಚಳವಳಿ’ಯ ಎಚ್ಚರಿಕೆ
ಮೈಕ್ರೋ ಫೈನಾನ್ಸ್ ಸಂಸ್ಥೆಯ ಗೂಂಡಾವರ್ತನೆಯನ್ನು ಉಗ್ರವಾಗಿ ಖಂಡಿಸಿರುವ ದಲಿತಪರ ಸಂಘಟನೆಗಳು ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೆ ಧಾವಿಸಿವೆ. ತಕ್ಷಣವೇ ಮನೆಯ ಬೀಗ ತೆರೆದು ಕುಟುಂಬಕ್ಕೆ ವಾಸಿಸಲು ಅವಕಾಶ ನೀಡದಿದ್ದರೆ, ಕೆ.ಆರ್. ಪೇಟೆಯ ಈಕ್ವಿಟಾಸ್ ಫೈನಾನ್ಸ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ‘ತಮಟೆ ಚಳವಳಿ’ ನಡೆಸಲಾಗುವುದು ಎಂದು ಸಂಘಟನೆಯ ನಾಯಕರು ಎಚ್ಚರಿಸಿದ್ದಾರೆ.