ತುಮಕೂರು : ಅರಣ್ಯ ಇಲಾಖೆ ಮಂಜೂರು ಮಾಡಿದ ಕಾಮಗಾರಿ ನಿರ್ವಹಿಸಲು ಕಾಂಟ್ರಾಕ್ಟರ್ ಒಬ್ಬರಿಂದ ₹2,60,000 ಲಂಚಕ್ಕೆ ಬೇಡಿಕೆಯಿಟ್ಟು, ಹಣ ಸ್ವೀಕರಿಸುತ್ತಿದ್ದ ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ (RFO) ಸತೀಶ್‌ಚಂದ್ರ ಕೆ.ಎಸ್. ಹಾಗೂ ಅವರ ಕಚೇರಿಯ ಹೊರಗುತ್ತಿಗೆ ನೌಕರ (ಕ್ಯಾಂಪ್ ವಾಚರ್) ಶೋಖಿತ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪ್ರಕರಣದ ಹಿನ್ನೆಲೆ:
ದೂರುದಾರರಾದ ಬಿ.ಜೆ. ಶಿವರಾಜು ಅವರು ಅರಣ್ಯ ಮತ್ತು ಸಿವಿಲ್ ಕಾಂಟ್ರಾಕ್ಟರ್ ಆಗಿದ್ದು, ಗುಬ್ಬಿ ಅರಣ್ಯ ವಲಯದಲ್ಲಿ ಸಿ.ಸಿ.ಟಿ. (CCT) ಅಗೆಯುವುದು ಹಾಗೂ ಬದುಗಳ ಮೇಲೆ ಗಿಡ ನೆಡುವ ಕಾಮಗಾರಿಗೆ ಜುಲೈ 13, 2026 ರಂದು ಕಾರ್ಯಾದೇಶ ಪಡೆದಿದ್ದರು. ಕಾಮಗಾರಿ ಆರಂಭಿಸುತ್ತಿದ್ದಂತೆ ಅರಣ್ಯಾಧಿಕಾರಿ ಸತೀಶ್‌ಚಂದ್ರ ಲಂಚ ನೀಡುವಂತೆ ತಾಕೀತು ಮಾಡಿದ್ದರು. ಅದರಂತೆ ಈಗಾಗಲೇ ಮೊದಲ ಕಂತಾಗಿ ₹50,000 ಲಂಚವನ್ನು ತಮ್ಮ ಸರ್ಕಾರಿ ವಸತಿ ಗೃಹದಲ್ಲಿ ಬಲವಂತವಾಗಿ ಪಡೆದುಕೊಂಡಿದ್ದು, ಬಾಕಿ ಹಣಕ್ಕೆ ನಿರಂತರ ಬೇಡಿಕೆ ಇಡುತ್ತಿದ್ದರು.
ಲೋಕಾಯುಕ್ತ ದಾಳಿ ಹಾಗೂ ಟ್ರ್ಯಾಪ್:
ಲಂಚ ನೀಡಲು ಇಷ್ಟವಿಲ್ಲದ ಕಾಂಟ್ರಾಕ್ಟರ್ ಶಿವರಾಜು ಅವರು ಶುಕ್ರವಾರ (ಸೆ. 11) ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾಯುತ್ತಿದ್ದರು.
ಶುಕ್ರವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರು ಹಮ್ಮಿಕೊಂಡ ಮಿಂಚಿನ ಟ್ರ್ಯಾಪ್ ಕಾರ್ಯಾಚರಣೆಯ ವೇಳೆ, ಅರಣ್ಯಾಧಿಕಾರಿ ಸತೀಶ್‌ಚಂದ್ರ ಅವರ ಸೂಚನೆಯಂತೆ ಅವರ ಕಚೇರಿ ಕ್ಯಾಂಪ್ ವಾಚರ್ ಶೋಖಿತ್ ದೂರುದಾರರಿಂದ ₹2,00,000 ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಹಣದ ಸಮೇತ ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ತನಿಖೆ ಮುಂದುವರಿಕೆ:
ಲೋಕಾಯುಕ್ತ ಎಸ್‌ಪಿ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿಗಳಾದ ಡಾ. ಸಂತೋಷ್ ಕೆ.ಎಂ., ಮಂಜುನಾಥ್ ಎಂ. ಹಾಗೂ ಇನ್ಸ್‌ಪೆಕ್ಟರ್ ಶಾಂತನಾಥ ಜಿ. ವನ್ನೂರ ಮತ್ತು ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.