ಮೈಸೂರು : ನಗರದಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮೈಸೂರು ಸಿಸಿಬಿ (CCB) ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು ₹95 ಸಾವಿರ ಮೌಲ್ಯದ 1 ಕೆಜಿ 800 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಕೊಡಗು ಮೂಲದ ಕ್ಲವಿನ್ ಬಂಧಿತ ಆರೋಪಿ. ಈತ ಮೈಸೂರಿನ ವಿಜಯನಗರ 3ನೇ ಹಂತದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದುಕೊಂಡು, ಅಲ್ಲಿಂದಲೇ ಸಾರ್ವಜನಿಕರಿಗೆ ಹಾಗೂ ಯುವಕರಿಗೆ ಅಕ್ರಮವಾಗಿ ಗಾಂಜಾ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ಸಿಬ್ಬಂದಿಗಳು ಕೊಠಡಿಯ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆರೋಪಿ ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.