Skip to main content

Police Roundup

ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

Share News

ಬೆಂಗಳೂರು: ತಾತನ ಸ್ವಯಾರ್ಜಿತ (ಸ್ವಂತ ಸಂಪಾದನೆ) ಆಸ್ತಿಯು ಕೌಟುಂಬಿಕ ಒಪ್ಪಂದ ಅಥವಾ ವಿಭಜನೆಯ ಮೂಲಕ ತಂದೆಯ ಕೈ ಸೇರಿದರೆ, ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ಹೊರತು ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ. ಆದ್ದರಿಂದ ಅಂತಹ ಆಸ್ತಿಯಲ್ಲಿ ಪಾಲು ಕೇಳಲು ಮೊಮ್ಮಕ್ಕಳಿಗೆ ಯಾವುದೇ ಕಾನೂನಾತ್ಮಕ ಹಕ್ಕಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

 

​ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್. ಸ್ವಾಮಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದ್ದು, ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.

 

ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್. ಸ್ವಾಮಿ ಅವರ ಗಮನಕ್ಕೆ ಬಾರದೇ ಭಾರತದಲ್ಲಿದ್ದ ಕುಟುಂಬಕ್ಕೆ ಸೇರಿದ 10 ಎಕರೆ ಜಮೀನನ್ನು ಅವರ ಪೋಷಕರು ಮಾರಾಟ ಮಾಡಿದ್ದರು. ಅಲ್ಲದೆ, ತಂದೆಗೆ ಸೇರಿದ ಆಸ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಿ ಭಾರಿ ಲಾಭ ಗಳಿಸಿ, ಅದರಿಂದ ಬೇರೆ ಆಸ್ತಿಗಳನ್ನೂ ಖರೀದಿಸಲಾಗಿತ್ತು. “ಇವೆಲ್ಲವೂ ನಮ್ಮ ಪೂರ್ವಜರಿಂದ ಬಂದ ಜಂಟಿ ಕುಟುಂಬದ ಆಸ್ತಿಗಳಾಗಿದ್ದು, ಬ್ಯಾಂಕ್ ಠೇವಣಿ ಸೇರಿದಂತೆ ಎಲ್ಲದರಲ್ಲೂ ನನಗೂ ಪಾಲು ಸಿಗಬೇಕು” ಎಂದು ಉಷಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

 

ವೈಯಕ್ತಿಕ ಆಸ್ತಿಯಾಗಲಿದೆಯೇ ಹೊರತು ಪಿತ್ರಾರ್ಜಿತವಲ್ಲ: ಉಷಾ ಅವರ ತಾತ ಸ್ವಂತ ಕಷ್ಟದಿಂದ ಸಂಪಾದಿಸಿದ್ದ ಆಸ್ತಿಯನ್ನು ಕೌಟುಂಬಿಕ ಒಪ್ಪಂದದ ಮೂಲಕ ತಮ್ಮ ಮಕ್ಕಳಿಗೆ (ಉಷಾ ಅವರ ತಂದೆಗೆ) ಹಂಚಿದ್ದರು. ತಾತನ ಸ್ವಂತ ಆಸ್ತಿ ತಂದೆಯ ಕೈ ಸೇರಿದಾಗ ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ಹೊರತು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗುವುದಿಲ್ಲ.

​ತಂದೆಗೆ ಸಂಪೂರ್ಣ ವಿಲೇವಾರಿ ಅಧಿಕಾರ: ತನ್ನ ವೈಯಕ್ತಿಕ ಆಸ್ತಿಯನ್ನು ತಂದೆಯು ಯಾರಿಗಾದರೂ ಮಾರಾಟ ಮಾಡಲು ಅಥವಾ ವಿಲೇವಾರಿ ಮಾಡಲು ಕಾನೂನುಬದ್ಧವಾಗಿ ಸಂಪೂರ್ಣ ಸ್ವತಂತ್ರರಾಗಿರುತ್ತಾರೆ.

​ಸಾಕ್ಷ್ಯಾಧಾರಗಳ ಕೊರತೆ: ಸದರಿ ಆಸ್ತಿಗಳು ಜಂಟಿ ಕುಟುಂಬಕ್ಕೆ ಸೇರಿದವು ಎಂಬುದನ್ನು ಸಾಬೀತುಪಡಿಸಲು ಮೇಲ್ಮನವಿದಾರರು ಯಾವುದೇ ಸೂಕ್ತ ಸಾಕ್ಷ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

 

ತಾತನ ಆಸ್ತಿಯೆಲ್ಲಾ ತಂತಾನೇ ಮೊಮ್ಮಕ್ಕಳಿಗೆ ಬರುತ್ತದೆ ಎನ್ನುವ ಸಾರ್ವಜನಿಕ ವಲಯದ ತಪ್ಪು ಕಲ್ಪನೆಗೆ ಈ ತೀರ್ಪು ಸ್ಪಷ್ಟ ಕಾನೂನು ಚೌಕಟ್ಟನ್ನು ಒದಗಿಸಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin